ರಾಜಕೀಯ ಮರೆತು ಕಾವೇರಿಗಾಗಿ ಪಕ್ಷಾತೀತ ಹೋರಾಟ – ಸುಪ್ರೀಂ ಮೆಟ್ಟಿಲೇರಲು ಸರ್ವಪಕ್ಷಗಳ ಸಭೆ ನಿರ್ಣಯ

Public TV
2 Min Read
all party meeting Cauvery Water issue 3

ಬೆಂಗಳೂರು: ರಾಜಕೀಯ ಜಂಜಾಟದಲ್ಲಿ ಕಾವೇರಿ ವಿವಾದವನ್ನು ಮರೆತಿದ್ದ ರಾಜ್ಯದ ಜನಪ್ರತಿನಿಧಿಗಳು ಕೊನೆಗೂ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಕುರಿತಂತೆ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಗಂಣದಲ್ಲಿ ನಡೆದ ಸಭೆಯಲ್ಲಿ, ಜುಲೈ 2ರಂದು ನಡೆಯಲಿರುವ ಪ್ರಾಧಿಕಾರದ ಸಭೆಗೆ ರಾಜ್ಯದ ಪ್ರತಿನಿಧಿಗಳಾದ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಕಾವೇರಿ ನೀರಾವರಿ ನಿಗಮದ ಎಂಡಿ ಪ್ರಸನ್ನ ಅವರನ್ನ ಕಳುಹಿಸಲು ತೀರ್ಮಾನಿಸಲಾಗಿದೆ.

all party meeting Cauvery Water issue 6

ಈ ವೇಳೆ ವಿಪಕ್ಷ ನಾಯಕ ಯಡಿಯೂರಪ್ಪ, ಉಭಯ ಸದನಗಳ ನಾಯಕರು, ಕೇಂದ್ರ ಸಚಿವರು, ಸಂಸದರು ಹಾಗೂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸೇರಿದಂತೆ ಕಾವೇರಿ ಜಲಾನಯನ ಭಾಗದ ಶಾಸಕರು ಪಾಲ್ಗೊಂಡು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.

ಸಭೆ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಗೆ ರಾಜ್ಯದಿಂದ ನಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತೇವೆ. ಜುಲೈ 2 ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇದೆ. ಆ ಸಭೆಯಲ್ಲಿ ನಮ್ಮ ಪ್ರತಿನಿಧಿ ಇರುತ್ತಾರೆ. ಅಷ್ಟೇ ಅಲ್ಲ ನಮಗಾಗಿರುವ ಅನ್ಯಾಯವನ್ನು ಕೇಂದ್ರದ ಮುಂದೆ ಪ್ರತಿಭಟಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಅಂತಿಮ ಹಂತದ ನ್ಯಾಯಾಲಯದ ಹೋರಾಟದಲ್ಲಿ ಹೇಗೆ ವಾದ ಮಂಡನೆ ಮಾಡಬೇಕು ಎಂದು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

BSY Cauvery

ಇದೇ ವೇಳೆ ಮತನಾಡಿದ ವಿಪಕ್ಷ ನಾಯಕ ಯಡಿಯೂರಪ್ಪ ಅವರು, ನಿರ್ವಹಣಾ ಮಂಡಳಿ ಬಗ್ಗೆ ಲೋಕಸಭೆ ಅಧಿವೇಶನದಲ್ಲಿ ಚರ್ಚಿಸಲು ತೀರ್ಮಾನ ಮಾಡಲಾಗಿದೆ. ಸಾಧ್ಯವಾದರೆ ಸಂವಿಧಾನ ಪೀಠದಲ್ಲಿ ಪ್ರಶ್ನೆ ಮಾಡಲು ಸಿದ್ಧರಿದ್ದೇವೆ. ಸಭೆಯಲ್ಲಿ ಉತ್ತಮ ಚರ್ಚೆಯಾಗಿದೆ. ಜಲ, ನಾಡು, ನುಡಿ ವಿಚಾರದಲ್ಲಿ ನಾವು ಯಾವಾಗಲೂ ಸರ್ಕಾರದ ಜೊತೆಗೆ ಇದ್ದೇವೆ. ಕಾವೇರಿ ವಿಚಾರದಲ್ಲಿ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಲೋಕಸಭೆ ಅಧಿವೇಶನದಲ್ಲಿ ಈ ಕುರಿತು ನಾವು ಚರ್ಚಿಸುತ್ತೇವೆ. ಕೇಂದ್ರ ಸಚಿವರು ಕೂಡ ಸಹಕಾರ ಕೊಡುತ್ತಾರೆ. ಅನಂತಕುಮಾರ್ ಕೂಡ ಈ ಕುರಿತು ಹಲವು ಸಲಹೆ ಕೊಟ್ಟಿದ್ದಾರೆ ಎಂದರು.

ಮಾಜಿ ಸಿಎಂ ಗೈರು: ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬೆಂಗಳೂರಿನಲ್ಲಿದ್ದರೂ ಕೂಡ ಸಭೆಗೆ ಗೈರು ಹಾಜರಾಗಿದ್ದರು. ಕಾವೇರಿಯಂತಹ ಪ್ರಮುಖ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ತಮ್ಮ ಸ್ವಗೃಹದಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಜೊತೆ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *