ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಮಳೆಯ ಅಬ್ಬರ ಜಾಸ್ತಿಯಾಗಿದ್ದು, ಮಳೆಯ ರಭಸಕ್ಕೆ ತೋಯ್ದು ಹೋಗಿದ್ದ ಕಂಪೌಂಡ್ ಕುಸಿದು ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಉಳ್ಳೂರಿನಲ್ಲಿ ಈ ಘಟನೆ ನಡೆದಿದೆ.
22 ವರ್ಷದ ಧನ್ಯಾ ಗೋಡೆ ಕುಸಿದು ಬಿದ್ದು ಮೃತಪಟ್ಟ ಯುವತಿ. ಉಳ್ಳೂರಿನ ನಂದಿಕೇಶ್ವರ ದೈವಸ್ಥಾನ ಸಮೀಪದಲ್ಲಿ ಈ ಘಟನೆ ನಡೆದಿದ್ದು, ದೈವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ವಾಪಾಸ್ ಬರುವ ಹೊತ್ತಿಗೆ ಈ ದುರ್ಘಟನೆ ನಡೆದಿದೆ.
ಮನೆಯ ಸಮೀಪದಲ್ಲೇ ದೈವಸ್ಥಾನವಿದ್ದು ಅಲ್ಲಿಗೆ ತೆರಳಿದ ಧನ್ಯ ಮನೆಗೆ ಹಿಂದುರಿಗಿ ಬರುತ್ತಿದ್ದರು. ಇನ್ನು ಧನ್ಯಾ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಕಾಂ ಓದುತ್ತಿದ್ದರು. ಮೃತ ಧನ್ಯಾರ ತಂದೆ ಚಂದ್ರಶೇಖರ ಶೆಟ್ಟಿ ಹೈದ್ರಾಬಾದ್ ಹೋಟೆಲ್‍ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಹೇಮಾ ಅವರೊಂದಿಗೆ ಧನ್ಯಾ ವಾಸಿಸುತ್ತಿದ್ದರು. ದಂಪತಿಗೆ ಮೂರು ಹೆಣ್ಣು ಮಕ್ಕಳಿದ್ದು, ಧನ್ಯಾ ಕೊನೆ ಮಗಳಾಗಿದ್ದಳು.
ಘಟನೆಯ ಕುರಿತು ಮಾಹಿತಿ ಪಡೆದ ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಬೈಂದೂರು ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಮಳೆಯ ಅಬ್ಬರ ಜೋರಾಗಿದೆ.
ಮೇ 29 ರಂದು ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ಶಾಲೆಯಿಂದ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿ 9 ವರ್ಷದ ನಿಧಿ ಆಚಾರ್ಯ ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದಳು.