ಹೈದರಾಬಾದ್: ಕಳೆದ ಕೆಲ ದಿನಗಳ ಹಿಂದೆ ಟಾಲಿವುಡ್‍ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ಶ್ರೀ ರೆಡ್ಡಿ ಶಾಕಿಂಗ್ ಹೇಳಿಕೆ ನೀಡಿದ ಬಳಿಕ ಮತ್ತೊಬ್ಬ ಕಲಾವಿದೆ ಟಾಲಿವುಡ್ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ.
ಟಾಲಿವುಡ್ ನಲ್ಲಿ ಬಿಗ್ ಹಿಟ್ ಆಗಿದ್ದ `ಅರ್ಜುನ್ ರೆಡ್ಡಿ’ ಹಾಗೂ `ಪೆಳ್ಳಿ ಚೂಪುಲು’ ಸಿನಿಮಾಗಳಿಗೆ ಸಾಹಿತ್ಯ ಬರೆದಿದ್ದ ಶ್ರೇಷ್ಠ ಈ ಕುರಿತು ಆರೋಪ ಮಾಡಿದ್ದು, ನಿರ್ಮಾಪರೊಬ್ಬರ ಪತ್ನಿ ತಮ್ಮ ಪತಿಯ ಕೋರಿಕೆಗಳ್ನು ಪೂರೈಸಲು ಹೇಳಿದ್ದರು ಎಂದು ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.
ಸಿನಿಮಾ ಉದ್ಯಮದಿಂದ ಕೆಲ ತಿಂಗಳು ಬ್ರೇಕ್ ಪಡೆದಿದ್ದ ಕಾರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಿನಿಮಾ ರಂಗದಲ್ಲಿ ಕೆಲವರು ನೇರವಾಗಿಯೇ ಈ ಕುರಿತು ಕೇಳಿದ್ದಾರೆ. ಆದರೆ ನಾನು ನನ್ನ ಬರವಣಿಗೆ ಮೂಲಕ ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಮುಂದೆಯೇ ಮಹಿಳಾ ನಿರ್ದೇಶಕರೊಬ್ಬರಿಗೆ ನಡೆದ ಘಟನೆಯನ್ನು ಹಂಚಿಕೊಂಡಿರುವ ಅವರು, ಒಬ್ಬ ವ್ಯಕ್ತಿ ಮಹಿಳಾ ನಿರ್ದೇಶಕರಿಗೆ ಪ್ರಪೋಸ್ ಮಾಡಲು ಗೋವಾದಲ್ಲಿ ಪಾರ್ಟಿ ಏರ್ಪಡಿಸಿದ್ದ. ಆದರೆ ಈ ಪಾರ್ಟಿಗೆ ತೆರಳಲು ಆಕೆ ನಿರಾಕರಿಸಿದ ವೇಳೆ ಹಲ್ಲೆ ನಡೆಸಿದ್ದರು. ಈ ವೇಳೆ ತಾನು ಅಸಹಾಯಕಳಾಗಿ ನಿಂತಿದ್ದೆ. ಇದರಿಂದ ತಾನು ಸಿನಿಮಾ ರಂಗ ಕೆಲ ತಿಂಗಳು ಬ್ರೇಕ್ ಪಡೆದಿದ್ದೆ ಎಂದು ತಿಳಿಸಿದ್ದಾರೆ.
ಟಾಲಿವುಡ್ ಜನಪ್ರಿಯ ಗೀತಾ ಸಾಹಿತಿಯಾಗಿರುವ ಶ್ರೇಷ್ಠ ಅವರು, ಇದುವರೆಗೂ `ಮಧುರಂ ಮಧುರಂ’, `ಯುದ್ಧ ಶರಣಂ’, `ಪೆಳ್ಳಿ ಚೂಪುಲು’ ಮತ್ತು `ಅರ್ಜುನ್ ರೆಡ್ಡಿ’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಹಿಂದೆ ಟಾಲಿವುಡ್ ನಲ್ಲಿ ಶ್ರೀ ರೆಡ್ಡಿ ಆರೋಪಗಳ ಬಳಿಕ ಹಲವರು ಕಾಸ್ಟಿಂಗ್ ಕೌಚ್ ಬಗ್ಗೆ ಆರೋಪ ಪ್ರತ್ಯಾರೋಪ ಮಾಡಿದ್ದರು.