ನಾಗ್ಪುರ: ಅಪರಾಧಗಳ ಉಪನಗರ ಎಂಬ ಕುಖ್ಯಾತಿಯನ್ನು ಹೊಂದಿರುವ ಮಹಾರಾಷ್ಟ್ರದ ನಾಗ್ಪುರದ ಡಿಘೋರಿ ಬಿಜೆಪಿ ಮುಖಂಡ ಸೇರಿದಂತೆ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಡಿಘೋರಿ ಪೊಲೀಸ್ ಠಾಣಾ ವ್ಯಾಪ್ತಿಯ ಆರಾಧನಾ ನಗರದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತ ಕಮಲಾಕರ್ ಸೇರಿದಂತೆ ಕುಟುಂಬದ ನಾಲ್ವರು ಸದಸ್ಯರನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
ಕಮಲಾಕರ್ ಪೋಹನಕರ್, ಅವರ ಪತ್ನಿ ಅರ್ಚನಾ, ಮಗಳು ವೇದಾಂತಿ ಹಾಗೂ ಅಳಿಯ ಗಣೇಶ, ತಾಯಿ ಮೀರಾಬಾಯಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಮರುದಿನ ಬೆಳಿಗ್ಗೆ ಪಕ್ಕದ ಮನೆಯವರು ಕಮಲಾಕರ್ ಅವರನ್ನು ಕೂಗಿದ್ದಾರೆ. ಆದರೆ ಅವರಿಂದ ಯಾವುದೇ ಪ್ರತಿಕಿಯೆ ಬಾರದ್ದರಿಂದ ಹತ್ತಿರಕ್ಕೆ ಹೋಗಿ ನೋಡಿದ್ದಾರೆ. ಆಗ ದುಷ್ಕರ್ಮಿಗಳ ಕೃತ್ಯ ಬೆಳಕಿಗೆ ಬಂದಿದೆ.
ಕಮಲಾಕರ್ ಒಬ್ಬ ಬಿಜೆಪಿ ಮುಖಂಡರಾಗಿದ್ದು, ಸಮಾಜದಲ್ಲಿ ಉತ್ತಮ ಗೌರವ ಹೊಂದಿದ್ದರು. ಅವರು ಯಾರೊಂದಿಗೂ ವೈರತ್ವ ಹೊಂದಿರಲಿಲ್ಲ ಎಂದು ಕಮಲಾಕರ್ ಸಂಬಂಧಿಯೋರ್ವರು ತಿಳಿಸಿದ್ದಾರೆ.