ಬೆಂಗಳೂರು: ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯುತ್ತಿದ್ದಂತೆಯೇ ರಾಜ್ಯದಲ್ಲಿ ವರಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ.
ಉತ್ತರ ಭಾರತದಲ್ಲಿ ಅಪ್ಪಳಿಸಿರುವ ಧೂಳಿನ ಬಿರುಗಾಳಿ ಮಳೆ ಚಂಡಮಾರುತ ಕರ್ನಾಟಕಕ್ಕೂ ತಟ್ಟಿದೆ. ಗುರುವಾರ ರಾತ್ರಿ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದ್ದು, ಜನಜೀವನವನ್ನೇ ಅಸ್ಥವ್ಯಸ್ತಗೊಳಿಸಿದೆ.
ಸಿಲಿಕಾಮನ್ ಸಿಟಿ ಬೆಂಗಳೂರಿನಲ್ಲಿ ವರುಣನ ದರ್ಶನವಾಗಿದ್ದು. ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ಗೋರಗುಂಟೆಪಾಳ್ಯ, ಶೇಷಾದ್ರಿಪುರಂ, ಮೆಜೆಸ್ಟಿಕ್ ಸೇರಿದಂತೆ ನಗರದ ಸುತ್ತಮುತ್ತ ಮಳೆಯಾಗಿದೆ. ಗಾಳಿ ಸಹಿತ ಮಳೆಗೆ ಬೃಹತ್ ಮರಗಳು, ಕರೆಂಟ್ ಕಂಬಗಳು ಧರೆಗುರುಳಿವೆ. ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಜನ ಕತ್ತಲಲ್ಲಿ ಕಳೆಯುವಂತಾಗಿತ್ತು. ಇನ್ನು ಹುಬ್ಬಳ್ಳಿಯ ಕುಂದಗೋಳದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಬಂದಿದ್ದವರಲ್ಲಿ ಓರ್ವ ಸಿಡಿಲಿಗೆ ಬಲಿಯಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಧಾರವಾಡದಲ್ಲೂ ಸಿಡಿಲು ಬಡಿದು 4 ಕುರಿ ಸಾವನ್ನಪ್ಪಿವೆ. ಬೆಳಗಾವಿಯ ಅಥಣಿಯಲ್ಲಿ ಚುನಾವಣಾ ಚೆಕ್ ಪೋಸ್ಟ್ ಮೇಲ್ಛಾವಣಿ ಹಾರಿ ಹೋಗಿ ಸಿಬ್ಬಂದಿ ಪರದಾಡಿದ್ದಾರೆ. ತುಮಕೂರು, ಮೈಸೂರು, ಹಾಸನ, ನೆಲಮಂಗಲ, ಮಡಿಕೇರಿ, ಗದಗದಲ್ಲೂ ಭಾರೀ ಮಳೆಯಾಗಿದೆ.
ಇನ್ನು ಮೂರು ದಿನಗಳ ಕಾಲ ಮಳೆಯಾಗುವುದಾಗಿ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಆದ್ದರಿಂದ ಮತದಾನಕ್ಕೂ ವರುಣ ಅಡ್ಡಿಪಡಿಸುವ ಸಾಧ್ಯತೆ ಇದೆ.