ಕೋಲ್ಕತ್ತಾ: ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ, ವಿಕೆಟ್ ಕೀಪರ್ ಈಶಾನ್ ಕಿಶಾನ್ ಕೋಲ್ಕತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ಹೆಲಿಕಾಪ್ಟರ್ ಶಾಟ್ ಹೊಡೆದು ಸಿಕ್ಸರ್ ಸಿಡಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅವರ ವಿಶಿಷ್ಟ ಶೈಲಿಯ ಹೆಲಿಕಾಪ್ಟರ್ ಶಾಟ್ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಸದ್ಯ ಈಶಾನ್ ಕಿಶಾನ್ ಈ ರೀತಿ ಬ್ಯಾಟ್ ಬೀಸಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ. ಬುಧವಾರ ಈಡಾನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇವಲ 21 ಎಸೆತ ಎದುರಿಸಿದ ಕಿಶಾನ್ 5 ಬೌಂಡರಿ, 6 ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿ ಮಿಂಚಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು.
ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಈಶಾನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ 210 ರನ್ ಸಿಡಿಸಿತ್ತು. ಇದಕ್ಕೂ ಮುನ್ನ ಪಂದ್ಯದ 14ನೇ ಓವರ್ ಎಸೆದ ಕುಲ್‍ದೀಪ್ ಬೌಲಿಂಗ್ ನಲ್ಲಿ ಸ್ಟ್ರೈಕ್ ನಲ್ಲಿದ್ದ ಈಶಾನ್ ಕಿಶಾನ್ 4 ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ 25 ರನ್ ಗಳಿಸಿ ಮಿಂಚು ಹರಿಸಿದ್ದರು.
ಗೆಲುವಿನ ಗುರಿ ಬೆನ್ನತ್ತಿದ್ದ ಕೊಲ್ಕತ್ತಾ ತಂಡವನ್ನು 108 ರನ್ ಗಳಿಗೆ ಅಲೌಟ್ ಆಗುವ ಮೂಲಕ ಮುಂಬೈ 102 ರನ್ ಗಳ ಬೃಹತ್ ಅಂತರದಿಂದ ಜಯಗಳಿಸಿತು. ಅಲ್ಲದೇ ಈ ಟೂರ್ನಿಯಲ್ಲಿ ಪಡೆದ ದಾಖಲೆ ಅಂತರದ ಜಯ ಎಂಬ ಹೆಗ್ಗಳಿಕೆಗೂ ಕಾರಣವಾಯಿತು. ಕೊಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಮುಂಬೈ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ. ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮುಂಬೈ ನಾಲ್ಕನೇ ಸ್ಥಾನಕ್ಕೆ ಏರಿದೆ.
https://twitter.com/videos_shots/status/994245698626334720?
ಕೋಲ್ಕತ್ತಾ ವಿರುದ್ಧ ಮುಂಬೈ ಇದುವರೆಗೂ ಆಡಿರುವ 23 ಪಂದ್ಯಗಳಲ್ಲಿ 18 ರಲ್ಲಿ ಗೆಲುವು ಪಡೆದಿರುವುದು ವಿಶೇಷವಾಗಿದೆ. ಅಲ್ಲದೇ ಕೋಲ್ಕತ್ತಾ ಸತತ 8 ಪಂದ್ಯಗಳಲ್ಲಿ ಮುಂಬೈ ವಿರುದ್ಧ ಸೋಲುಂಡಿದೆ.
ಕ್ಯಾಪ್ಟನ್ ಕೂಲ್ ಧೋನಿ ಹೆಲಿಕಾಪ್ಟರ್ ಶಾಟ್ ಹಿಂದೆ ನೋವಿನ ಕಥೆಯಿದೆ. ಧೋನಿ ಅವರಿಗೆ ಈ ರೀತಿಯ ಸಿಕ್ಸರ್ ಹೊಡೆಯುವುದನ್ನು ಕಲಿಸಿಕೊಟ್ಟವರು ಸ್ನೇಹಿತ ಮಾಜಿ ರಣಜಿ ಆಟಗಾರ ಸಂತೋಷ್ ಲಾಲ್. ಧೋನಿ ಮತ್ತು ಸಂತೋಷ್ ಲಾಲ್ ಈ ಹಿಂದೆ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್ ಲಾಲ್ ಉತ್ತಮ ಬ್ಯಾಟ್ಸ್ ಮನ್ ಆಗಿದ್ದರು. ಇಬ್ಬರು ಒಟ್ಟಿಗೆ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಧೋನಿಗೆ ಹೆಲಿಕಾಪ್ಟರ್ ಶಾಟ್ ಹೊಡೆಯುವುದನ್ನು ಹೇಳಿಕೊಟ್ಟಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದ ಸಂತೋಷ್ 2013ರ ಜೂನ್‍ನಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಧೋನಿಯ ಹೆಲಿಕಾಪ್ಟರ್ ಶಾಟ್ ಪ್ರಯತ್ನದಲ್ಲಿ ಸೆಹ್ವಾಗ್, ಬ್ರೇಟ್ ಲೀ ಫೇಲ್: ವಿಡಿಯೋ