ಮೈಸೂರು: ಮತದಾನದ ಕುರಿತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಜಾಗೃತಿ ಮೂಡಿಸುತ್ತಿದ್ದಾರೆ.
ಮತದಾನ ಮಾಡಿದವರೇ ನಿಜವಾದ ಬಿಗ್‍ಬಾಸ್ ಎಂದು ನಿವೇದಿತಾ ಗೌಡ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ವತಿಯಿಂದ ಆಯೋಜಿಸಿರುವ ಮತ ಜಾಗೃತಿ ಕಾರ್ಯಕ್ರಮಕ್ಕೆ ನಿವೇದಿತಾ ಗೌಡ ರಾಯಭಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮತದಾನ ಮಾಡುವಂತೆ ಮನವಿಯ ಜಾಗೃತಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ನಾವು ನೀವು ಚೆನ್ನಾಗಿರಬೇಕಾದರೆ ಕಡ್ಡಾಯವಾಗಿ ಒಂದು ನಿಯಮವನ್ನು ಪಾಲಿಸಬೇಕು. ನಮ್ಮದ್ದು ಪ್ರಜಾಪ್ರಭುತ್ವ ದೇಶ. ಈ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪಭ್ರುಗಳು. ಇದನ್ನು ಯಶಸ್ಸು ಗಳಿಸಲು ಪ್ರಜೆಗಳಾದ ನಮ್ಮೆಲರ ಕರ್ತವ್ಯ. ಅದಕ್ಕಾಗಿ ನಾವು ನಮ್ಮ ಮತವನ್ನು ಮತಗಟ್ಟೆಗೆ ಬಂದು ಚಲಾಯಿಸಬೇಕು ಎಂದು ನಿವೇದಿತಾ ಹೇಳಿದ್ದಾರೆ.
ಚುನಾವಣೆ ದಿನ ಮತಗಟ್ಟೆಗೆ ಹೋಗಿ ನಾನು ನನ್ನ ಮತವನ್ನು ಹಾಕುತ್ತಿದ್ದಿನಿ. ನೀವು ಕೂಡ ಮತಗಟ್ಟೆಗೆ ಬಂದು ನಿಮ್ಮ ಮತವನ್ನು ಚಲಾಯಿಸಿ. ನಾವು ನಮ್ಮ ನರೆಹೊರೆಯವರ ಮತದಾನದ ಬಗ್ಗೆ ಜಾಗೃತಿ ಮೂಡಿಸೋಣ ಹಾಗೂ ಕಡ್ಡಾಯವಾಗಿ ಅವರು ಸಹ ಮತ ಹಾಕುವಂತೆ ಮಾಡೋಣ ಎಂದು ತಿಳಿಸಿದ್ದಾರೆ.
ಜಾಗೃತ ಮತದಾರ ಪ್ರಜಾಪ್ರಭುತ್ವದ ನೇತಾರ, ಮತದಾನ ಮಾಡುವ ಮತದಾರರೇ ನಿಜವಾದ ಬಿಗ್ ಬಾಸ್ ಎಂದು ಹೇಳುವ ಮೂಲಕ ಬಿಗ್ ಬಾಸ್-5ರ ಸ್ಪರ್ಧಿ ನಿವೇದಿತಾ ಗೌಡ ಮತದಾನದ ಜಾಗೃತಿ ಮೂಡಿಸಿದ್ದಾರೆ.