ಕೋಲ್ಕತ್ತಾ: ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯದ ವೇಳೆ ಉತ್ತಮ ಪ್ರದರ್ಶನ ನೀಡಿದ್ದ ನಿತೀಶ್ ರಾಣಾ ಅವರಿಗೆ ಕ್ಯಾಪ್ಟನ್ ಕೊಹ್ಲಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಇದೀಗ ರಾಣಾ ಆ ಉಡುಗೊರೆಯ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಣಾ ಒಂದೇ ಓವರಿನಲ್ಲಿ ಎಬಿಡಿ ವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ್ದರು. ಯುವ ಆಟಗಾರ ನಿತೀಶ್ ರಾಣಾ ಅವರ ಅತ್ಯುತ್ತಮ ಪ್ರದರ್ಶನ ನೋಡಿ ಖುಷಿಯಾದ ಕೊಹ್ಲಿ ಪಂದ್ಯದ ನಂತರ ಅವರಿಗೆ ತಮ್ಮ ಬ್ಯಾಟ್ ಗಿಫ್ಟ್ ಆಗಿ ನೀಡಿದ್ದಾರೆ.
ರಾಣಾ ಒಂದು ಓವರ್ ಎಸೆದು 11 ರನ್ ನೀಡಿ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ವಿಕೆಟ್ ಪಡೆದಿದ್ದರು. 2 ವಿಕೆಟ್ ಕಳೆದು ಕೊಂಡು 127 ರನ್ ಗಳಿಸಿದ್ದ ಆರ್‌ಸಿಬಿ ಹಠಾತ್ ಎರಡು ವಿಕೆಟ್ ಕಳೆದುಕೊಂಡ ಪರಿಣಾಮ 14.3 ಓವರ್ ಗಳಲ್ಲಿ 127 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ತನ್ನ ಬೌಲಿಂಗ್ ನಲ್ಲಿ ಔಟ್ ಆದ ಕೊಹ್ಲಿಯನ್ನು ರಾಣಾ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಒಬ್ಬ ಕಿರಿಯ ಆಟಗಾರ ಭಾರತ ತಂಡದ ನಾಯಕನನ್ನು ನಿಂದಿಸಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು.
ಕ್ರಿಕೆಟ್ ಪ್ರೇಮಿಗಳು ನಿಂದಿಸಿದ ವಿಚಾರವನ್ನು ಇಟ್ಟುಕೊಂಡು ಟೀಕೆ ಮಾಡುತ್ತಿದ್ದರೆ ಪಂದ್ಯ ಮುಗಿದ ಬಳಿಕ ಕೊಹ್ಲಿ ರಾಣಾ ಅವರನ್ನು ಪ್ರೋತ್ಸಾಹಿಸಿ ತಮ್ಮ ಬ್ಯಾಟ್ ಉಡುಗೊರೆಯಾಗಿ ನೀಡಿದ್ದರು. ಅಷ್ಟೇ ಅಲ್ಲದೇ ನಿಮ್ಮ ಮುಂದಿನ ಭವಿಷ್ಯ ಚೆನ್ನಾಗಿರಲಿ ಎಂದು ಶುಭ ಹಾರೈಸಿದ್ದಾರೆ.
ಸದ್ಯ ರಾಣಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಕೊಹ್ಲಿ ನೀಡಿದ ಬ್ಯಾಟ್‍ನ ಫೋಟೋವನ್ನು ಹಾಕಿ ಅದಕ್ಕೆ “ಕ್ರಿಕೆಟ್ ದಿಗ್ಗಜರು ಹೊಗಳಿದ್ದಾರೆ. ಇದರಿಂದ ಇನ್ನಷ್ಟು ಹೆಚ್ಚು ಪರಿಶ್ರಮಪಟ್ಟು ಆಡಲು ಮನಸ್ಸಾಗುತ್ತದೆ. ಧನ್ಯವಾದಗಳು ವಿರಾಟ್ ಅಣ್ಣ” ಎಂದು ರಾಣಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.