ಅನ್‍ಕಟ್ ಮೂವಿ ‘ಹೀಗೊಂದ್ ದಿನ’ ಬರ್ತಿದೆ ನೋಡಿ!

Public TV
2 Min Read
HEEGONDU DINA 3

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸಾ ಆಲೋಚನೆ, ಹೊಸಾ ಪ್ರಯೋಗಗಳ ಪರ್ವ ಕಾಲವೊಂದು ಶುರುವಾಗಿದೆಯಲ್ಲಾ? ಅದರ ಕೊಂಡಿಯಂತೆ ತಯಾರಾಗಿ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ಚಿತ್ರ `ಹೀಗೊಂದ್ ದಿನ’!

ಸದಭಿರುಚಿಯ ಸಿನಿಮಾಸಕ್ತರ ವಲಯದಲ್ಲಿ ಸಣ್ಣಗೆ ಈ ಸಿನಿಮಾ ಕುರಿತಾಗಿ ನಿರೀಕ್ಷೆ ಜೀವ ಪಡೆದುಕೊಳ್ಳುತ್ತಿದೆ. ಯಾವುದೇ ಚಿತ್ರದ ಪಾಲಿಗಾದರೂ ತಾನೇ ತಾನಾಗಿ ಹುಟ್ಟಿಕೊಳ್ಳುವ ಇಂಥಾ ನಿರೀಕ್ಷೆಯೇ ಗೆಲುವಿನ ಮೊದಲ ಮೆಟ್ಟಿಲು. ಅಂಥಾದ್ದೊಂದು ಮೆಟ್ಟಿಲೇರಿ ನಿಂತಿರುವ ಖುಷಿಯಲ್ಲಿ ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಸೇರಿದಂತೆ ಚಿತ್ರತಂಡ ಈ ವಾರ ತೆರೆಗೆ ಬರುತ್ತಿರುವ ಸಿನಿಮಾದ ಫಲಿತಾಂಶಕ್ಕಾಗಿ ಕಾದಿದ್ದಾರೆ.

Heegondu Dina 36

ಹಾಗೆ ನೋಡಿದರೆ, ಹೀಗೊಂದು ದಿನ ಹೆಚ್ಚು ಸೌಂಡ್ ಮಾಡಲು ಕಾರಣ ಇದು ಅನ್ ಕಟ್ ಮೂವಿ ಅನ್ನೋದಕ್ಕೆ. ಅಂದಹಾಗೆ ಅನ್ ಕಟ್ ಮೆಥಡ್ಡಿನಲ್ಲಿ ಒಂದು ಚಿತ್ರವನ್ನು ರೂಪಿಸೋದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ನಿರ್ದೇಶಕರು ಸೇರಿದಂತೆ ಇಡೀ ಚಿತ್ರತಂಡ ಸಮರ್ಥವಾಗಿ ನಿಭಾಯಿಸಿದ ಖುಷಿಯಲ್ಲಿದೆ. ಇದು ಎರಡು ಗಂಟೆಯಲ್ಲಿ ನಡೆಯೋ ಕಥಾ ಹಂದರ ಹೊಂದಿರೋ ಚಿತ್ರ. ಒಂದ್ಯಾವುದೋ ಗುರಿಯಿಟ್ಟುಕೊಂಡು ಮನೆಯಿಂದ ಹೊರ ಬೀಳೋ ಹುಡುಗಿಯ ಸುತ್ತಾ ಎರಡು ಘಂಟೆಗಳ ಕಾಲ ನಡೆಯುವ ವಿದ್ಯಮಾನ ಈ ಚಿತ್ರದ ಮುಖ್ಯ ವಿಚಾರ.

ಇದಕ್ಕಾಗಿ ದಿನಾ ಬೆಳಗ್ಗೆ ಆರರಿಂದ ಎಂಟು ಘಂಟೆವರೆಗೆ ಶೂಟ್ ಮಾಡಲಾಗುತ್ತಿತ್ತಂತೆ. ಅಷ್ಟೂ ಜನ ಕಲಾವಿದರು ಹೊಸಾ ಪ್ರಯೋಗವೆಂಬ ಕಾರಣದಿಂದ ಸಾಥ್ ನೀಡಿದ್ದಾರೆಂಬ ತೃಪ್ತಿ ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಅವರದ್ದು.

Heegondu Dina 1

ಸಿಂಧು ಲೋಕನಾಥ್ ಮುಖ್ಯಭೂಮಿಕೆಯಲ್ಲಿರುವ ಹೀಗೊಂದು ದಿನ ಪಕ್ಕಾ ಮಹಿಳಾ ಪ್ರಧಾನವಾದ ಚಿತ್ರ. ಕಥಾ ಹಂದರವೂ ಸೇರಿದಂತೆ ಎಲ್ಲ ವಿಚಾರಗಳಲ್ಲಿಯೂ ಹೊಸತನ ಹೊಂದಿದೆ. ಈವರೆಗೆ ಒಂದಷ್ಟು ಪಾತ್ರಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಸಿಂಧು ಲೋಕನಾಥ್ ಈ ಚಿತ್ರದಲ್ಲಿ ಇಲ್ಲಿವರೆಗಿನ ಅಷ್ಟೂ ಪಾತ್ರಗಳಿಗಿಂತಲೂ ಭಿನ್ನವಾದ, ಸವಾಲಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರಂತೆ.

Heegondu Dina 27

ಅಂದಹಾಗೆ ವಿಕ್ರಂ ಯೋಗಾನಂದ್ ನಿರ್ದೇಶನದ ಈ ಚಿತ್ರವನ್ನು ನಿರ್ಮಾಣ ಮಾಡಿರುವವರು ದಿವ್ಯದೃಷ್ಟಿ ಚಂದ್ರಶೇಖರ್. ಕನ್ನಡ ಚಿತ್ರರಂಗದಲ್ಲಿ ಹತ್ತು ವರ್ಷಗಳಿಂದ ಸಕ್ರಿಯರಾಗಿರುವ ಚಂದ್ರಶೇಖರ್ ಅಭಿರುಚಿಯ ಚಿತ್ರ ಮಾಡಬೇಕೆಂಬ ಉದ್ದೇಶದಿಂದ ಎರಡ್ಮೂರು ವರ್ಷಗಳಿಂದಲೂ ತಯಾರಿ ನಡೆಸಿದ್ದರು. ಕಡೆಗೂ ‘ಹೀಗೊಂದು ದಿನ’ ಚಿತ್ರದ ಮೂಲಕ ಆ ಕನಸು ನನಸಾಗಿಸಿಕೊಂಡಿದ್ದಾರೆ. ನಿರ್ಮಾಪಕರೂ ಸೇರಿದಂತೆ ಇಡೀ ಚಿತ್ರ ತಂಡ ಟ್ರೈಲರ್‍ಗೆ ಸಿಕ್ಕ ವ್ಯಾಪಕ ಪ್ರತಿಕ್ರಿಯೆ ಕಂಡು ಖುಷಿಗೊಂಡಿದ್ದಾರೆ. ಯಾರೇ ಯಶಸ್ವೀ ಪುರುಷರ ಹಿಂದೆ ಒಬ್ಬಳು ಹೆಣ್ಣಿರುತ್ತಾಳೆಂಬುದು ಲೋಕ ರೂಢಿಯ ಮಾತು. ಯಶಸ್ವೀ ಪುರುಷರ ಹಿಂದಿರುವ ಇಂಥಾ ಹೆಣ್ಣಿನ ತ್ಯಾಗವನ್ನು, ಕಷ್ಟವನ್ನು ಯಾರೂ ಮುನ್ನೆಲೆಗೆ ತಂದು ಮಾತಾಡೋದಿಲ್ಲ. ಆದರೆ ಈ ಚಿತ್ರದಲ್ಲಿ ಅಂಥಾ ಹೆಣ್ಣಿನ ಸೂಕ್ಷ್ಮ ಸಂಗತಿಗಳನ್ನು ರೋಚಕವಾದ ತಿರುವುಗಳ ಮೂಲಕ, ಚೆಂದದ ಕಥಾ ಹಂದರದ ಮೂಲಕ ವಿವರಿಸಲಾಗಿದೆಯಂತೆ. ಇನ್ನುಳಿದಂತೆ ಈ ಚಿತ್ರದಲ್ಲಿ ಘಟಾನುಘಟಿಗಳಾದ ನಟ ನಟಿಯರೇ ಅಭಿನಯಿಸಿದ್ದಾರೆ. ಶೋಭರಾಜ್, ಪದ್ಮಜಾ ರಾವ್, ಮಿತ್ರಾ ಮುಂತಾದ ನಟ ನಟಿಯರ ದಂಡೇ ಈ ಚಿತ್ರದಲ್ಲಿದೆ. ಈಗಾಗಲೇ ಟ್ರೈಲರ್ ಕೂಡಾ ಚಿತ್ರದ ಬಗ್ಗೆ ಕೌತುಕ ಹುಟ್ಟಿಸುವಲ್ಲಿ ಯಶ ಕಂಡಿದೆ. ಈ ಚಿತ್ರವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆಂಬುದಷ್ಟೇ ಸದ್ಯದ ಕುತೂಹಲ.

Heegondu Dina 12

ವಿಕಾಸ್ ಅವರ ಕಥೆಗೆ, ನಿರ್ದೇಶಕ ವಿಕ್ರಮ್ ಯೋಗಾನಂದ್ ಅವರೇ ಛಾಯಾಗ್ರಹಕರು, ಸಂಕಲನಕಾರರು ಹಾಗೂ ವಿಷುವಲ್ ಎಫ್ಫೆಕ್ಟ್ ಸಹ ನೀಡಿದ್ದಾರೆ, ಅಭಿಲಾಷ್ ಗುಪ್ತ ಸಂಗೀತ, ರಾಮಕೃಷ್ಣ ರಣಗಟ್ಟಿ ಗೀತ ಸಾಹಿತ್ಯ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *