ಮೈಸೂರು: ತಪಾಸಣೆ ವೇಳೆ ದಾಖಲೆ ಇಲ್ಲದ ವಾಹನ ಸಿಕ್ಕಿಬಿದ್ರೆ ಪೊಲೀಸ್ರು ಏನು ಮಾಡ್ತಾರೆ? ಸೀಜ್ ಮಾಡಿ ಸ್ಟೇಷನ್ ನಲ್ಲಿ ಇಡ್ತಾರೆ. ಹಾಗೆ ಸೀಜ್ ಆದ ಬೈಕೊಂದು ಪೊಲೀಸ್ ಸ್ಟೇಷನ್ ನಿಂದ ಗಾಯಬ್ ಆಗಿದೆ.
ಮೈಸೂರು ಜಿಲ್ಲೆಯ ನೂತನ ತಾಲೂಕಿನ ಸರಗೂರು ಪೊಲೀಸ್ ಠಾಣೆಯಲ್ಲಿ ಇಂತಹದ್ದೊಂದು ಪ್ರಕರಣ ನಡೆದಿದೆ. ನಂಜನಗೂಡಿನ ಹೆಡಿಯಾಲ ಗ್ರಾಮದ ಕೂಲಿ ಕಾರ್ಮಿಕ ಸಿದ್ದು ಅವರಿಗೆ ಎರಡು ತಿಂಗಳ ಹಿಂದೆ ಪೊಲೀಸರ ತಪಾಸಣೆ ವೇಳೆ ಸಂಚಾರ ನಿಯಮ ಉಲ್ಲಂಘನೆಯ ಹಲವು ಕೇಸ್ ಗಳು ಬೈಕ್ ಮೇಲೆ ಇರುವುದು ಗೊತ್ತಾಗಿದೆ. ಅದರ ದಂಡದ ಮೊತ್ತ 2 ಸಾವಿರ ರೂಪಾಯಿ. ಆಗ ದಂಡ ಕಟ್ಟಲು ಹಣ ಇಲ್ಲ ಅಂತಾ ಸಿದ್ದು ಹೇಳಿದ ಕಾರಣ ಪೊಲೀಸರು ಬೈಕ್ ಸೀಜ್ ಮಾಡಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.
ಹಲವು ದಿನಗಳ ಬಳಿಕ ದಂಡದ ಹಣ ಹೊಂದಿಸಿಕೊಂಡ ಸಿದ್ದು, ಬೈಕ್ ಬಿಡಿಸಿಕೊಳ್ಳಲು ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿಂದ ಪೊಲೀಸರ ಡ್ರಾಮಾ ಶುರುವಾಗಿದೆ. ನಾವು ಬೈಕನ್ನು ವಶಕ್ಕೇ ಪಡೆದಿಲ್ಲ ಅಂತ ಪೊಲೀಸರು ಸಬೂಬು ಹೇಳಿ ಸಿದ್ದು ಅವರನ್ನು ಅಲ್ಲಿಂದ ಸಾಗುಹಾಕುವ ಪ್ರಯತ್ನ ನಡೆದಿದೆ. ಹೀಗಾಗಿ ಸಿದ್ದು ತನ್ನ ಬೈಕ್ ಗಾಗಿ ಪ್ರತಿನಿತ್ಯ ದಾಖಲೆ ಸಮೇತ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ.
ಪೊಲೀಸರ ಈ ವರ್ತನೆಗೆ ಕಾರಣ ಸ್ಟೇಷನ್ ನಲ್ಲಿದ್ದ ಬೈಕ್ ನಾಪತ್ತೆಯಾಗಿರುವುದು. ಸಿದ್ದು ಜೊತೆ ಸಿಕ್ಕಿಬಿದ್ದ ಇತರೆ ಬೈಕ್ ಗಳು ಸ್ಟೇಷನ್ ನಲ್ಲಿ ಇವೆ. ಆದ್ರೆ ಸಿದ್ದು ಬೈಕ್ ಮಾತ್ರ ಕಾಣಿಸ್ತಿಲ್ಲ. ಅದಕ್ಕಾಗಿ ಈಗ ಬಾ… ಆಗ ಬಾ.. ಅಂತ ಸಬೂಬು ಹೇಳ್ತಿದ್ದಾರೆ. ಈಗ ವರಸೆ ಚೇಂಜ್ ಮಾಡಿರೋ ಪೊಲೀಸರು ನಾವು ಬೈಕ್ ಸೀಜ್ ಮಾಡಿಲ್ಲ ಅನ್ನೋ ಕಾರಣ ಕೊಡುತ್ತಿದ್ದಾರೆ. ಆದರೆ ಸಿದ್ದು ಬಳಿ ಪೊಲೀಸರು ಬೈಕ್ ಸೀಜ್ ಮಾಡಿರೋ ದಾಖಲೆ ಪತ್ರ ಇದೆ.