ಬೆಂಗಳೂರು: ಹಬ್ಬ ಹರಿದಿನ, ಮನೆಯ ವಿಶೇಷ ಸಮಾರಂಭದ ದಿನಗಳಲ್ಲಿ ತಪ್ಪದೇ ಮಾಡುವ ಹೋಳಿಗೆ ಅಥವಾ ಒಬ್ಬಟ್ಟು ಎಲ್ಲರ ಅಚ್ಚುಮೆಚ್ಚಿನ ಸ್ವೀಟ್. ಆದರೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆ ಹೋಳಿಗೆ ವಾರ ಪೂರ್ತಿ ತನ್ನ ಗ್ರಾಹಕರಿಗೆ ರುಚಿ ರುಚಿಯ ಹೋಳಿಗೆ ನೀಡುವ ವ್ಯವಸ್ಥೆ ಮಾಡಿದೆ.
ಹಬ್ಬ ಹರಿದಿನಗಳ ಸಂದರ್ಭದಲ್ಲಿ ಬಹುತೇಕರು ಮನೆಯಲ್ಲೇ ಹೋಳಿಗೆ ಊಟ ಮಾಡಿ ಸಂಭ್ರಮಿಸುತ್ತಾರೆ. ಆದರೆ ಇತ್ತೀಚೆಗೆ ಹಬ್ಬದ ವೇಳೆ ಹೋಟೆಲ್ ಗೆ ಹೋಗಿ ಊಟ ಮಾಡುವ ಪ್ರವೃತ್ತಿಯೂ ಹೆಚ್ಚಾಗುತ್ತಿದ್ದು, ಇಂತಹ ಗ್ರಾಹಕರಿಗಾಗಿ ವಾರ ಎಲ್ಲಾ ದಿನಗಳಲ್ಲಿ ಹೋಳಿಗೆ ಉಣಬಡಿಸಲೆಂದೇ ಮನೆ ಹೋಳಿಗೆ ಆರಂಭಿಸಲಾಗಿದೆ.
ವೈವಿಧ್ಯಮಯ ಹೋಳಿಗೆ: ಸಾಮಾನ್ಯವಾಗಿ ಹೋಳಿಗೆ ಎಂದರೆ ಕಾಯಿ ಮತ್ತು ಬೇಳೆ ಹೋಳಿಗೆಗಳು ಮೊದಲು ನೆನಪಿಗೆ ಬರುತ್ತವೆ. ಆದರೆ ಇಲ್ಲಿ ಅವೆರಡರ ಜೊತೆಗೆ ಖರ್ಜೂರ, ಬಾದಾಮಿ, ಕ್ಯಾರೆಟ್, ಗುಲ್ಕನ್ ಸೇರಿದಂತೆ ಸುಮಾರು 22 ಬಗೆಯ ಹೋಳಿಗೆಗಳು ದೊರೆಯುತ್ತದೆ. ಈ ಪಟ್ಟಿಯಲ್ಲಿ ಹಲವು ಹೊಸ ತರಹದ ಹೋಳಿಗೆಗಳನ್ನು ಸೇರ್ಪಡೆ ಮಾಡಲಾಗಿದ್ದು, ಶುಗರ್ ಫ್ರೀ, ಪೇಣಿ, ಖಾರ ಹೋಳಿಗೆಯು ದೊರೆಯುತ್ತದೆ.
ಖಾರದ ಜುಗಲ್ ಬಂದಿ: ಮನೆ ಹೋಳಿಗೆಯಲ್ಲಿ ಬರೀ ಹೋಳಿಗೆಯಷ್ಟೇ ಅಲ್ಲದೇ ಕುರುಕಲು ತಿಂಡಿಗಳು ದೊರೆಯುತ್ತದೆ. ಈ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆದಿದೆ. ಪ್ರಮುಖವಾಗಿ ಚಕ್ಕುಲಿ, ಕೋಡುಬಳೆ, ಚಿಪ್ಸ್, ಮುರುಕು, ಖಾರ ಸೇವ್, ನಿಪ್ಪಟ್ಟು, ಖಾರ ಬೂಂದಿ, ಬೆಣ್ಣೆ ಮುರುಕು ಜೊತೆಗೆ ಕಾಂಗ್ರೆಸ್ ಕಡಲೆ, ಚಿಂತಾಮಣಿ ಕಡಲೆ, ಹೆಸರುಬೇಳೆ, ಅವರೆ ಬೇಳೆ, ಬಟಾಣಿ ಹೀಗೆ ಎಲ್ಲಾ ಖಾರದ ಕುರುಕಲು ತಿಂಡಿಗಳು ಸಿಗುತ್ತದೆ.
ಮನೆ ಹೋಳಿಗೆಯಲ್ಲಿ ವಿಶೇಷವಾಗಿ ಅಮ್ಟೆಕಾಯಿ, ಮಾವಿನ ಕಾಯಿ ಸೇರಿದಂತೆ 15 ವಿವಿಧ ರೀತಿಯ ಉಪ್ಪಿನಕಾಯಿಗಳು, ಸಾರು ಪುಡಿ, ಹುಳಿ ಪುಡಿ, ಪುಳಯೋಗರೆ ಗೊಜ್ಜು, ರಸಂ ಪುಡಿ, ಬೆಳ್ಳುಳ್ಳಿ ಚಟ್ನಿ, ಹುರಿಗಡಲೆ ಚಟ್ನಿ, ಹಾಗಲಕಾಯಿ ಚಟ್ನಿ, ಕರಿಬೇವು ಚಟ್ನಿ ಪಡಿ ಸಹ ದೊರೆಯುತ್ತದೆ.
ಇನ್ನೂ ಸ್ಥಳದಲ್ಲೇ ಹೋಳಿಗೆ ಮಾಡಿಕೊಡುವುದರಿಂದ ತಿನ್ನಲೂ ಬಿಸಿಬಿಸಿ ದೊರೆಯುತ್ತದೆ. ಇದರ ಜೊತೆ ಒಂದಿಷ್ಟು ತುಪ್ಪ ಸೇರಿಸಿ ತಿಂದರೆ ಅದ್ರಲ್ಲಿ ಸಿಗೋ ಮಜಾನೇ ಬೇರೆ. ಅಲ್ಲದೇ ಇಲ್ಲಿಂದಲೇ ಮನೆಗೆ ಕಟ್ಟಿಸಿಕೊಂಡು ಹೋಗಿ ಮನೆಯವರೆಲ್ಲಾ ಒಟ್ಟಿಗೆ ಕೂತು ಸವಿಯುತ್ತೇವೆ. ದೂರದ ರಾಜ್ಯದಲ್ಲಿ ಇರುವ ತಮ್ಮ ಸಂಬಂಧಿಗಳಿಗೂ ಇಲ್ಲಿಂದ ತೆಗೆದುಕೊಂಡು ಹೋಗುತ್ತೇವೆ ಎಂದು ಗ್ರಾಹಕಿ ಸಂಗೀತ ಎಂಬವರು ಮನೆ ಹೋಳಿಗೆಯ ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಹಕಿ ಗ್ರೀಷ್ಮ ಪ್ರತಿಕ್ರಿಯಿಸಿ, ಮನೆ ಹೋಳಿಗೆಯ ವಿಶೇಷವೇ ಬಗೆ ಬಗೆಯ ರುಚಿ ನೀಡುವ ಹೋಳಿಗೆಗಳು. ಅಲ್ಲದೇ ಇಲ್ಲಿ ಮನೆಯಲ್ಲೇ ಮಾಡುವಂತಹ ಆರೋಗ್ಯಕರ ಗುಣಮಟ್ಟದ ಕುರುಕ್ ತಿಂಡಿ ಸಿಗುತ್ತದೆ. ಹೋಳಿಗೆಯೊಂದಿಗೆ ಮನೆಗೆ ಖಾರ ತಿಂಡಿಗಳನ್ನು ಕಟ್ಟಿಸಿಕೊಂಡು ಹೋಗುತ್ತೇವೆ ಎಂದರು.
ನಗರದ ಡಿವಿಜಿ ರಸ್ತೆ, ಜಯನಗರ, ಕತ್ರಿಗುಪ್ಪೆ ಸೇರಿದಂತೆ ರಾಜರಾಜೇಶ್ವರಿ ನಗರದಲ್ಲಿ ಮನೆ ಹೋಳಿಗೆ ಶಾಖೆಗಳಿದೆ. ಮನೆ ಹೋಳಿಗೆಯ ಮತ್ತಷ್ಟು ವಿಶೇಷತೆಗಳನ್ನು ತಿಳಿಯ ಬೇಕಾದರೆ ನೀವು ಒಮ್ಮೆ ಭೇಟಿ ನೀಡಿ ವಿವಿಧ ಬಗೆಯ ಹೋಳಿಗೆ ಹಾಗೂ ಖಾರದ ಕುರುಕ್ ತಿಂಡಿಗಳ ಸವಿ ನೋಡಬಹುದು.