ಬೆಂಗಳೂರು: ಖಾಸಗಿ ಚಾನೆಲೊಂದರಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋ ನಲ್ಲಿ ಆ್ಯಂಕರ್ ಅನುಶ್ರೀ ಅವರು ಸ್ಪರ್ಧಿಯೊಬ್ಬರ ಹುಟ್ಟುವನ್ನು ಆಚರಿಸಿಕೊಳ್ಳುವ ಮೂಲಕ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.
ಬೆಳಗಾವಿ ಮೂಲದ ಲಕ್ಷ್ಮೀ ಎಂಬವರ ಹುಟ್ಟುಹಬ್ಬವನ್ನು ಶೋನಲ್ಲಿ ಆಚರಿಸಿಕೊಳ್ಳಲಾಯಿತು. ಈ ವೇಳೆ ಅನುಶ್ರೀ ಅವರು ಲಕ್ಷ್ಮೀ ಅವರಿಗೆ ಶಾಲೆಗೆ ಹೋಗಲು ಬ್ಯಾಗ್ ನೀಡಿ ಬಳಿಕ ತನ್ನ ಶಾಲೆಯ ದಿನಗಳ ಬಗ್ಗೆ ನೆನಪಿಸಿಕೊಂಡರು.
ನಾನು ಶಾಲೆಗೆ ಹೋಗುವ ಸಮಯದಲ್ಲಿ ನನ್ನಲ್ಲಿ ಬ್ಯಾಗ್ ಇರಲಿಲ್ಲ. ಅವಾಗ ನಮಗೆ ಬ್ಯಾಗ್ ಕೊಡಿಸುವವರೂ ಯಾರೂ ಇರಲಿಲ್ಲ. ಹೀಗಾಗಿ ನಾನು ಪ್ಲಾಸ್ಟಿಕ್ ಚೀಲಗಳಲ್ಲಿ ಪುಸ್ತಕಗಳನ್ನು ಶಾಲೆಗೆ ಕೊಂಡೊಯ್ಯುತ್ತಿದ್ದೆ. ಆದ್ರೆ ಈಗ ಹಾಗೆ ಅಲ್ಲ. ಮಕ್ಕಳಿಗೆ ಬೇಕಾದಂತಹ ವೈರಟಿಯ ಬ್ಯಾಗ್ ಗಳು ಬಂದಿವೆ ಅಂತ ಹೇಳಿದ್ರು.
ತನ್ನದೇ ಶೈಲಿಯಲ್ಲಿ ಹಾಡುತ್ತಾ ಜನರ ಮನಗೆದ್ದಿರುವ ಲಕ್ಷ್ಮೀ ಅವರ ಹುಟ್ಟುಹಬ್ಬವನ್ನು ಆಚರಿಸಿರುವುದು ನೆರೆದವರ ಕಣ್ಣಂಚಲ್ಲಿ ನೀರು ತರಿಸಿತ್ತು. ಅಲ್ಲದೇ ಇದೇ ಮೊದಲ ಬಾರಿಗೆ ನಾನು ಕೇಕ್ ಕಟ್ ಮಾಡುತ್ತಿರುವುದಾಗಿ ಹೇಳಿ ಲಕ್ಷ್ಮೀ ಕೂಡ ಭಾವುಕರಾದ್ರು. ಕೇಕ್ ಕಟ್ ಮಾಡಿದ ಬಳಿಕ ಸರಿಗಮಪದ ಜಡ್ಜ್ ಗಳು ಲಕ್ಷ್ಮೀ ಅವರಿಗೆ ಗಿಫ್ಟ್ ನೀಡಿದ್ದಾರೆ. ಹಾಗೆಯೇ ಲಕ್ಷ್ಮೀ ಅವರು ಪುಸ್ತಕಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ತೆಗೆದುಕೊಂಡು ಹೋಗುತ್ತಾರೆ ಅನ್ನೋ ಮಾಹಿತಿ ಪಡೆದಿದ್ದ ಅನುಶ್ರೀ ಬ್ಯಾಗ್ ಉಡುಗೊರೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದರು.