ಜಮ್ಮು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ – ಯೋಧ, ಮಗಳಿಗೆ ಗಾಯ

Public TV
1 Min Read
jk attack

ಶ್ರೀನಗರ: ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರು ಉಗ್ರರು ಜಮ್ಮು ಕಾಶ್ಮೀರದ ಸುಂಜ್ವಾನ ಪ್ರದೇಶದಲ್ಲಿ ಸೇನಾ ಶಿಬಿರದ ಮೇಲೆ ಇಂದು ದಾಳಿ ನಡೆಸಿದ್ದು, ಓರ್ವ ಯೋಧ ಹಾಗೂ ಅವರ ಮಗಳು ಗಾಯಗೊಂಡಿದ್ದಾರೆ.

ಜಮ್ಮು ಪಠಾಣ್‍ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಶಿಬಿರವಿದ್ದು, ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಉಗ್ರರು ದಾಳಿ ನಡೆಸಿದ್ದಾರೆ. ಶಸ್ತ್ರಾಸ್ತ್ರಧಾರಿ ಉಗ್ರರು ಸೇನಾ ಪ್ರದೇಶದ ಒಳನುಗ್ಗಲು ಗುಂಡಿನ ದಾಳಿ ನಡೆಸಿದ್ದು, ಗ್ರೆನೇಡ್‍ಗಳನ್ನ ಎಸೆದಿದ್ದಾರೆ. ಉಗ್ರರ ಗುಂಡಿನ ದಾಳಿಯಿಂದ ಯೋಧ ಹಾಗೂ ಅವರ ಮಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

jk attack 1

ಸದ್ಯಕ್ಕೆ ಗುಂಡಿನ ದಾಳಿ ನಿಂತಿದ್ದು, ಸೇನೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆ ಮುಂದುವರೆದಿದೆ. ಈ ಪ್ರದೇಶದ 500 ಮೀಟರ್ ಒಳಗಿರುವ ಶಾಲೆಗಳನ್ನ ತೆರೆಯದಂತೆ ಜಿಲ್ಲಾಡಳಿತ ಸೂಚಿಸಿದೆ.

jk attack 3

ಇಂದು ಬೆಳಗ್ಗೆ 4.55ರ ಸುಮಾರಿಗೆ ಅನುಮಾನಾಸ್ಪದ ಓಡಾಟ ಕಂಡುಬಂತು. ಸೆಂಟ್ರಿ ಬಂಕರ್ ಫೈರ್ ಮಾಡಿದಾಗ ಅವರು ಪ್ರತಿದಾಳಿ ನಡೆಸಿದ್ರು. ಕಟ್ಟಡದೊಳಗೆ ಉಗ್ರರು ಅಡಗಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಜಮ್ಮು ಐಜಿಪಿ ಎಸ್‍ಡಿ ಸಿಂಗ್ ಜಮ್ವಾಲ್ ಹೇಳಿದ್ದಾರೆ. ಉಗ್ರರು ಜೈಷ್- ಎ- ಮಹಮ್ಮದ್ ಉಗ್ರ ಸಂಘಟನೆಯವರು ಎಂದು ಹೇಳಲಾಗಿದೆ. ಸದ್ಯ ಈ ಪ್ರದೇಶವನ್ನ ಪೊಲೀಸರು ಸುತ್ತುವರಿದಿದ್ದು, ಭದ್ರತಾ ಪಡೆ ಉಗ್ರರನ್ನ ಪತ್ತೆ ಮಾಡಲು ಡ್ರೋನ್ ಮತ್ತು ಹೆಲಿಕಾಪ್ಟರ್‍ಗಳನ್ನ ಬಳಸಿದೆ.

jk attack 2

2006ರಲ್ಲಿ ಕೂಡ ಇದೇ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆಗ 12 ಯೋಧರು ಹುತಾತ್ಮರಾಗಿ, 7 ಯೋಧರು ಗಾಯಗೊಂಡಿದ್ದರು. ಆತ್ಮಾಹುತಿ ದಾಳಿ ನಡೆಸಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *