ಬಾಗಲಕೋಟೆ: ಲಾಡ್ಜ್ ಗಳಲ್ಲಿ ರೂಮ್ ಬುಕ್ ಮಾಡಿ ಎಲ್‍ಸಿಡಿ ಟಿವಿಗಳನ್ನ ಕಳ್ಳತನ ಮಾಡಿದ್ದ ಹೈಟೆಕ್ ಟಿವಿ ಕಳ್ಳರನ್ನು ಪೊಲೀಸರು ಕಾರವಾರದ ಮುರಡೇಶ್ವರದಲ್ಲಿ ಬಂಧಿಸಿದ್ದಾರೆ.
ಬೆಂಗಳೂರಿನ ದಾಸರಹಳ್ಳಿಯ ವಾಸುದೇವ ಮತ್ತು ದಾವಣಗೆರೆಯ ಎನ್.ಪ್ರಕಾಶ್ ಬಂಧಿತ ಆರೋಪಿಗಳು. ಜನವರಿ 8ರಂದು ಕಳ್ಳರು ಬಾಗಲಕೋಟೆಯಲ್ಲಿ 8 ಟಿವಿಗಳನ್ನ ಕಳುವು ಮಾಡಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಜನವರಿ 4ರಂದು ಬೆಂಗಳೂರಿನಲ್ಲಿ ಕೂಡ ಇದೇ ರೀತಿ ಕೈಚಳಕ ತೋರಿದ್ದರು.
ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್ ನಲ್ಲಿಯ ಸೆವೆನ್ ಆಲೀವ್ಸ್ ಹೋಟೆಲ್‍ನಲ್ಲಿ ಕಳ್ಳತನ ಮಾಡಲಾಗಿತ್ತು. ಬಿಸಿನೆಸ್ ಸಂಬಂಧಪಟ್ಟಂತೆ ಬೆಂಗಳೂರಿಗೆ ಬಂದಿದ್ದು ಅಂತಾ ಹೇಳಿ ನಾಲ್ಕು ದಿನಕ್ಕೆ ಹೋಟೆಲ್‍ನಲ್ಲಿ ಕಳ್ಳ ರೂಮ್ ಪಡೆದುಕೊಂಡಿದ್ದ. ರೂಮ್ ಪಡೆದುಕೊಳ್ಳುವ ಮುನ್ನ ತಾನು ದೇವರಾಜ್ ಎಂಬ ಐಡಿ ಕಾರ್ಡ್‍ವೊಂದನ್ನ ಹೋಟೆಲ್ ಸಿಬ್ಬಂದಿಗೆ ನೀಡಿದ್ದ. ಆತ ನೀಡಿರುವ ಐಡಿ ಕಾರ್ಡ್ ನಕಲಿ ಎಂದು ತಿಳಿದುಬಂದಿತ್ತು. ಈ ಸುದ್ದಿಯನ್ನ ಪಬ್ಲಿಕ್ ಟಿವಿ ಬಿತ್ತರಿಸಿತ್ತು.
ಇದೀಗ ಪ್ರಕರಣ ಬೇಧಿಸಿದ ಬಾಗಲಕೋಟೆ ಪೊಲೀಸರು ಇಬ್ಬರನ್ನು ಬಂಧಿಸಿ 7 ಲಕ್ಷ ಮೌಲ್ಯದ ಟಿವಿಗಳನ್ನು ವಶಪಡಿಸಿಕೊಂಡಿದ್ದಾರೆ. ಎಸ್‍ಪಿ ರಿಷ್ಯಂತ್ ಮಾರ್ಗದರ್ಶನದಲ್ಲಿ ಡಿಎಸ್‍ಪಿ, ಸಿಪಿಐ ಸೇರಿ 21 ಜನರ ತಂಡ ಕಾರ್ಯಾಚರಣೆ ನಡೆಸಿ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಕಳವು ಮಾಡಿದ್ದ ಒಟ್ಟು 37 ಟಿವಿಗಳನ್ನ ವಶಪಡಿಸಿಕೊಂಡಿದ್ದಾರೆ.
https://www.youtube.com/watch?v=tbM9njEL8-w