ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತಮಿಳುನಾಡಿನ ಮೆಡಿಕಲ್ ವಿದ್ಯಾರ್ಥಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಸ್ನಾತಕೋತ್ತರ ವಿದ್ಯಾರ್ಥಿಯಾದ ಎಸ್. ಶರತ್ ಪ್ರಭು (24) ಬುಧವಾರ ತನ್ನ ಫ್ಲ್ಯಾಟ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಗುರು ತೇಗ್ ಬಹದ್ದೂರ್ ಮೆಡಿಕಲ್ ಆಸ್ಪತ್ರೆಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಶರತ್ ಬುಧವಾರ ಬೆಳಗ್ಗೆ ಪ್ರಜ್ಞೆಯಿಲ್ಲದೇ ವಾಶ್‍ರೂಮಿನಲ್ಲಿ ಬಿದ್ದಿದ್ದರು.
ಶರತ್ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ನೋಡಿದ ಸ್ನೇಹಿತರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದಾರಿ ಮಧ್ಯದಲ್ಲೇ ಶರತ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾಗ ಶರತ್ ಪ್ರಜ್ಞೆ ತಪ್ಪಿಬಿದ್ದ ಸ್ಥಳದಲ್ಲಿ ಇಂಜೆಕ್ಷನ್ ಪತ್ತೆಯಾಗಿದೆ.
ಶರತ್ ಸಾವಿನ ಹಿಂದಿನ ದಿನ ನಮ್ಮ ಜೊತೆ ಚೆನ್ನಾಗಿ ಮಾತನಾಡಿದ್ದನು. ಆಗ ಅವನು ಚೆನ್ನಾಗಿಯೇ ಇದ್ದ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ಶರತ್ ಪೋಷಕರು ಹೇಳಿದ್ದಾರೆ.
ಶರತ್ ಸಾವಿನಿಂದ ದೆಹಲಿಯಲ್ಲಿ ಓದುತ್ತಿರುವ ತಮಿಳು ನಾಡು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ವಿದ್ಯಾರ್ಥಿ ಸಂಘಗಳು ಹಾಗೂ ರಾಜಕೀಯ ಪಕ್ಷಗಳು ಈ ಪ್ರಕರಣದ ಬಗ್ಗೆ ಕ್ರಮ ತೆಗೆದುಕೊಳ್ಳಲು ತಮಿಳು ನಾಡು ಸರ್ಕಾರಕ್ಕೆ ತಿಳಿಸಿದೆ.
ಈ ಹಿಂದೆ ಎಂದರೆ ಕಳೆದ ವರ್ಷ ತಮಿಳು ನಾಡಿನ ವಿದ್ಯಾರ್ಥಿಯಾದ ಸರವಣನ್ ಕೂಡ ನಿಗೂಢವಾಗಿ ಸಾವನ್ನಪ್ಪಿದ್ದರು. ಸರವಣನ್ ಕೂಡ ದೆಹಲಿಯಲ್ಲಿ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಯಾಗಿದ್ದರು. ಸರವಣನ್ ಸಾವನ್ನಪ್ಪಿದ್ದ ಜಾಗದಲ್ಲೂ ಕೂಡ ಇಂಜೆಕ್ಷನ್ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ಬಂದ ನಂತರ ಲೆತಲ್ ಇಂಜೆಕ್ಷನ್‍ನಿಂದ ಸರವಣನ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು.
ಈ ಘಟನೆಯಲ್ಲಿ ಸಾವನ್ನಪ್ಪಿದ ಸರವಣನ್ ಹಾಗೂ ಶರತ್ ಬಾಬು ಇಬ್ಬರೂ ತಮಿಳು ನಾಡಿನ ತಿರುಪೂರುದವರಾಗಿದ್ದು, ಇಬ್ಬರೂ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದರು ಎಂದು ವರದಿಯಾಗಿದೆ.