ದಾವಣಗೆರೆ: ಪ್ರಿಯತಮೆ ತನ್ನಿಂದ ದೂರವಾಗುತ್ತಾಳೆ ಎಂದು ಭಯಗೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಹೊನ್ನಾಳಿ ತಾಲೂಕಿನ ಕಮಲಾಪುರ ಗ್ರಾಮದ ಮಹೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಅದೇ ಗ್ರಾಮದ ರಂಜಿತಾಳನ್ನು ಪ್ರೀತಿಸುತ್ತಿದ್ದ. ಇವರ ಪ್ರೀತಿ ಬಗ್ಗೆ ಮನೆಯವರಿಗೆ ತಿಳಿಯಿತು. ಆದರೆ ಇಬ್ಬರ ಮನೆಯವರು ಇವರ ಪ್ರೀತಿಗೆ ವಿರೋಧವನ್ನು ವ್ಯಕ್ತಪಡಿಸಿದ್ದರು.
ಹುಡುಗಿ ಮನೆಯವರು ಬೇರೆ ಹುಡುಗನ ಜೊತೆ ರಂಜಿತಾಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಇತ್ತ ಮಹೇಶ್ ಪ್ರಿಯತಮೆಯನ್ನು ಬಿಟ್ಟಿರಲು ಸಾಧ್ಯವಾಗದೇ ರಂಜಿತಳಾನ್ನು ಕರೆದುಕೊಂಡು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿಗೆ ಓಡಿ ಹೋಗಿದ್ದ. ಇಬ್ಬರೂ ಒಟ್ಟಿಗೆ ಇದ್ದು, ಆಗಾಗ ಸಣ್ಣ-ಪುಟ್ಟ ವಿಚಾರಕ್ಕೆ ಜಗಳವಾಡುತ್ತಿದ್ದರು. ಆದರೆ ಎರಡು ದಿನಗಳ ಹಿಂದೆ ಮತ್ತೆ ಜಗಳವಾಡಿದಾಗ ರಂಜಿತಾ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಆಕೆಯನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾನೆ.
ಇಂದು ಆಸ್ಪತ್ರೆಯಿಂದ ರಂಜಿತಾ ಡಿಸ್ಚಾರ್ಜ್ ಆಗಬೇಕಿತ್ತು. ಆದರೆ ಆತ್ಮಹತ್ಯೆ ಕೇಸ್ ನನ್ನ ಮೇಲೆ ಬರುತ್ತದೆ. ಮತ್ತೊಂದೆಡೆ ರಂಜಿತಾ ನನಗೆ ಸಿಗುವುದಿಲ್ಲ ಎಂಬ ಭಯದಿಂದ ಮನನೊಂದು ಮಹೇಶ್ ರಾತ್ರಿ ಆಸ್ಪತ್ರೆಯ ಆವರಣದಲ್ಲೇ ಮೆಟ್ಟಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ನಡೆದ ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.