ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ ಮಹಿಳೆ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಮಹಿಳೆಯನ್ನು ಸ್ವಂತ ಮಗಳೇ ಲವ್ವರ್ ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಕೆರೂರು ಪಟ್ಟಣದಲ್ಲಿ ಅಕ್ಟೋಬರ್ 31 ರಂದು 50 ವರ್ಷದ ಸಂಗವ್ವ ಎಂಬ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಮೃತರ ಕುಟುಂಬಸ್ಥರು ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದಾಗ ಭಯಾನಕ ಸತ್ಯ ಗೊತ್ತಾಗಿದ್ದು, ಮೃತ ಮಹಿಳೆಯ ಮಗಳಾದ ಹರ್ಷಾ ಬನ್ನೂರ ಮತ್ತು ಪ್ರಿಯಕರ ಶ್ರೀಕಾಂತ್ ಚಮ್ಮಾರ ಸೇರಿ ಕೊಲೆ ಮಾಡಿದ್ದಾರೆ ಎಂಬುದು ಬಯಲಾಗಿದೆ.
ಏನಿದು ಪ್ರಕರಣ?: ಸಂಗವ್ವಗೆ ಹರ್ಷಾ ಹಾಗೂ ಬಸು ಎಂಬ ಇಬ್ಬರು ಮಕ್ಕಳಿದ್ದಾರೆ. ತಂದೆಯಿಲ್ಲದ ಕಾರಣ ಮಗಳು ಹರ್ಷಾಳನ್ನು ತುಂಬಾ ಮುದ್ದು ಮಾಡಿ ಬೆಳೆಸಿದ್ದರು. ಹರ್ಷಾ ದ್ವಿತೀಯ ಪಿಯುಸಿ ಓದುವಾಗ ನರಗುಂದ ತಾಲೂಕು ಶೀರೋಳ ಗ್ರಾಮದ ಶ್ರೀಕಾಂತ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ತುಂಬಾ ಸಲುಗೆಯಿಂದ ಇದ್ದರು. ಶ್ರೀಕಾಂತ್ ಹರ್ಷಾ ಮನೆಗೆ ಆಗಾಗ ಹೋಗುತ್ತಿದ್ದ. ಇದನ್ನು ಗಮಿನಿಸಿದ ಸಂಗವ್ವ ಅವನಿಂದ ದೂರವಿರಲು ಹೇಳಿದ್ದರು. ತಾಯಿಯ ಮಾತನ್ನ ಕೇಳಿಸಿಕೊಳ್ಳದ ಹರ್ಷಾ, ನನಗೆ ನನ್ನ ಪ್ರಿಯಕರ ಬೇಕೆಂದು ಶ್ರೀಕಾಂತ್ ಜೊತೆ ಓಡಿ ಹೋಗಿದ್ದಳು. ನಂತರ ತಾಯಿ ಕಣ್ಣೀರು ಹಾಕಿ, ಮನೆಗೆ ಬರುವಂತೆ ಕೇಳಿದ್ದರಿಂದ 15 ದಿನಗಳ ನಂತರ ಮನೆಗೆ ಹಿಂದಿರುಗಿದ್ದಳು. ಆಗ ಹರ್ಷಾಳನ್ನು ಸಂಗವ್ವ ರೂಮಿನಲ್ಲಿ ಕೂಡಿ ಹಾಕಿದ್ದರು. ರೂಮಿನಲ್ಲೇ ಇದ್ದ ಹರ್ಷಾಗೆ ಅದ್ಹೇಗೋ ಫೋನ್ ಸಿಕ್ಕಿತ್ತು. ಆಗ ಶ್ರೀಕಾಂತ್‍ಗೆ ಕರೆ ಮಾಡಿ ನಡೆದ ಘಟನೆ ವಿವರಿಸಿದ್ದಳು. ನಾವು ಓಡಿ ಹೋಗೋಣ ಎಂದು ಹೇಳಿದ್ದಳು ಅಂತ ಮೃತ ಸಂಗವ್ವ ಅಣ್ಣ ಮಡಿವಾಳಪ್ಪ ಕಡಕೋಳ್ ವಿವರಿಸಿದ್ದಾರೆ.
ಮದುವೆ ಮಾತುಕತೆಗೆ ಬಂದು ಕೊಂದೇಬಿಟ್ರು: ಹರ್ಷಾಳ ಮಾತಿನಂತೆ ಶ್ರೀಕಾಂತ್ ವಿಜಯಪುರದಲ್ಲಿರುವ ತನ್ನ ಮಾವ ನವಲಪ್ಪನನ್ನು ಹರ್ಷಾಳ ಮನೆಗೆ ಕರೆದುಕೊಂಡು ಬಂದಿದ್ದ. ನವಲಪ್ಪ ಸಂಗವ್ವ ಬಳಿ ಮಾತನಾಡಿ ಶ್ರೀಕಾಂತ್ ಜೊತೆ ಹರ್ಷಾಳ ಮದುವೆ ಮಾಡಿಸಿಕೊಡುವುದಕ್ಕೆ ಕೇಳಿದ್ದರು. ಸಂಗವ್ವ ಇದಕ್ಕೆ ನಿರಾಕರಿಸಿ ಅವರ ಮೇಲೆ ಕೋಪಗೊಂಡು, ಬೈದು ಮನೆಯಿಂದ ಹೊರ ಹೋಗುವುದಕ್ಕೆ ಹೇಳಿದ್ದರು. ಇದ್ದರಿಂದ ಕೋಪಗೊಂಡ ಶ್ರೀಕಾಂತ್ ಹಾಗೂ ಅವನ ಮಾವ ನವಲಪ್ಪ, ಸಂಗವ್ವನ ಬಾಯಿಗೆ ಹತ್ತಿ ಇಟ್ಟು, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಸಂಗವ್ವ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದಾರೆಂದು ಮನೆಯವರು ನವೆಂಬರ್ 2 ರಂದು ಪೊಲೀಸರಿಗೆ ದೂರು ನೀಡಿದ್ದರು. ಆಗ ಹರ್ಷಾಳ ಮೇಲೆ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು ಹಾಗೂ ಪೊಲೀಸರು ಆಕೆಯ ಫೋನ್ ಟ್ರೇಸ್ ಮಾಡಿದ್ದರು. ನಂತರ ಹರ್ಷಾ, ಪ್ರಿಯಕರ ಶ್ರೀಕಾಂತ್, ಮಾವ ನವಲಪ್ಪನನ್ನು ಕೆರೂರು ಪೊಲೀಸರು ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.