ಬಾಗಲಕೋಟೆ: ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ನವಜಾತ ಶಿಶು ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕೆರೂರು ಪಟ್ಟಣದ ನಿವಾಸಿಯಾಗಿರುವ ಲಕ್ಷ್ಮಿ ಪತ್ತಾರ ಎಂಬವರೇ ಬಾಣಂತಿ. ಕಳೆದ ಎರಡು ದಿನಗಳಿಂದ ಹೆರಿಗೆ ನೋವು ಅನುಭವಿಸಿ, ಕೆರೂರಿನ ಎರಡು ಖಾಸಗಿ ಆಸ್ಪತ್ರೆಗೆ ತೆರಳಿದ್ರು. ಆದ್ರೆ ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಚಿಕಿತ್ಸೆ ಸಿಗದ ಕಾರಣ ಲಕ್ಷ್ಮಿ ಅವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಬುಧವಾರ ರಾತ್ರಿಯೇ ಲಕ್ಷ್ಮಿ ಅವರ ಹೊಟ್ಟೆಯಲ್ಲಿ ಮಗು ಸಾವನ್ನಪ್ಪಿದ್ರೂ, ತಲೆಕೆಡೆಸಿಕೊಳ್ಳದ ಸರ್ಕಾರಿ ಆಸ್ಪತ್ರೆ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕುಮಾರೇಶ್ವರ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ರು. ಈ ಹಿನ್ನೆಲೆಯಲ್ಲಿ ಲಕ್ಷ್ಮಿ ಅವರನ್ನು ಕುಮಾರೇಶ್ವರ ಆಸ್ಪತ್ರೆಗೆ ತಂದಾಗ, ತಪಾಸನೆ ಮಾಡಿದ ಕುಮಾರೇಶ್ವರ ಆಸ್ಪತ್ರೆ ವೈದ್ಯರು ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿರುವ ಸುದ್ದಿ ತಿಳಿಸಿದ್ದಾರೆ.
ಬಾಣಂತಿ ಲಕ್ಷ್ಮಿ ಸರ್ಕಾರಿ ಆಸ್ಪತ್ರೆ ವೈದ್ಯರ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.