ಅಪಘಾತದಲ್ಲಿ ಗಾಯಗೊಂಡು ಮಹಿಳೆ ನರಳಾಡ್ತಿದ್ರೆ ಸಾರ್ವಜನಿಕರು ವಿಡಿಯೋ ಮಾಡಿದ್ರು!

Public TV
1 Min Read
MND ACCIDENT 3

ಮಂಡ್ಯ: ಅಪಘಾತವಾದ ಸಂದರ್ಭದಲ್ಲಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿರುವವರನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಬರುವವರೆಗೂ ಕಾಯಲೇಬೇಕಾ ಎಂಬ ಚರ್ಚೆಯನ್ನು ಮಂಡ್ಯದಲ್ಲಿ ನಡೆದ ಅಮಾನವೀಯ ಘಟನೆಯೊಂದು ಹುಟ್ಟುಹಾಕಿದೆ.

ಅಕ್ಟೋಬರ್ 23 ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮಹದೇಶ್ವರಪುರ ಗ್ರಾಮದ ಬಳಿ ಗೀತಾ ಎಂಬ ಮಹಿಳೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಬೆಳಗ್ಗೆ ಐದೂವರೆ ಸುಮಾರಿಗೆ ಅಪಘಾತ ನಡೆದಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡು ನಡು ರಸ್ತೆಯಲ್ಲೇ ನರಳಾಡುತ್ತಿದ್ರು. ಇದನ್ನು ಗಮನಿಸಿದ ಸ್ಥಳೀಯರು ಮಹಿಳೆ ಬಳಿ ಬೇರೆ ವಾಹನಗಳು ಸಂಚರಿಸದಂತೆ ಸುತ್ತಲು ತೆಂಗಿನ ಗರಿ ಹಾಕಿದ್ದರು. ತಕ್ಷಣ ಪೊಲೀಸರಿಗೆ ಸುದ್ದಿ ಕೂಡ ಮುಟ್ಟಿಸಿದ್ರು. ಆದ್ರೆ ಎರಡು ವಾಹನಗಳಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಕೂಡ ಮಹಿಳೆಯನ್ನು ತಕ್ಷಣ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸದೆ ಆಂಬುಲೆನ್ಸ್ ಗಾಗಿ ಕಾದು ಕುಳಿತಿದ್ರು.

MND ACCIDENT 2

ಪೊಲೀಸರು ಸ್ಥಳಕ್ಕೆ ಬಂದ 20 ನಿಮಿಷದ ನಂತರ ಆಂಬುಲೆನ್ಸ್ ಬಂದಿದ್ದು, ಅಲ್ಲಿಯವರೆಗೂ ರಕ್ತ ಸುರಿಸುತ್ತಾ ನಡುರಸ್ತೆಯಲ್ಲೇ ಮಹಿಳೆ ನರಳಾಡುತ್ತಿದ್ದ ದೃಶ್ಯ ಮನ ಕಲಕುವಂತಿದೆ. ನಂತರ ಆಂಬುಲೆನ್ಸ್ ನಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ.

MND ACCIDENT 1

ಈ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರು ತಾವು ಬಂದ ತಕ್ಷಣ ಆಂಬುಲೆನ್ಸ್ ಗಾಗಿ ಕಾಯದೇ ಮಹಿಳೆಯನ್ನು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿದರೆ ಆಕೆ ಬದುಕುಳಿಯುತ್ತಿದ್ದರೇನೋ.

ಸಾರ್ವಜನಿಕರು ಅಪಘಾತವಾದವರಿಗೆ ಸಹಾಯ ಮಾಡದೇ ಮೊಬೈಲ್‍ ನಲ್ಲಿ ಚಿತ್ರೀರಿಸುವುದು ಅಮಾನವೀಯ ಘಟನೆ ಒಂದಾದರೆ, ಪೊಲೀಸರು ನಡೆದುಕೊಂಡ ರೀತಿಗೆ ಏನೆನ್ನಬೇಕು ಎಂಬ ಟೀಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *