ರಾಮನಗರ: ಹಳಿ ಮೇಲೆ ಸೆಲ್ಫಿ ತೆಗೆಯಲು ಹೋಗಿ ಮೂವರು ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ರಾಮನಗರದ ವಂಡರ್ ಲಾ ಬಳಿ ನಡೆದಿದೆ.
ಮೃತಪಟಟ್ಟವರು ಕೋರಮಂಗಲ ನಿವಾಸಿಗಳಾದ ಪ್ರಭು, ಹುಳಿಮಾವು ನಿವಾಸಿ ರೋಹಿತ್ ಮತ್ತು ಆನಂದ್ ಎಂದು ಗುರುತಿಸಲಾಗಿದೆ. ಇವರು ಜಯನಗರ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಮೂವರೂ ಸ್ನೇಹಿತರು ಬೆಳಗ್ಗೆ ವಂಡರ್ ಲಾಗೆ ಎಂದು ಬಂದಿದ್ದಾರೆ. ಮೈಸೂರು ರಸ್ತೆಯಿಂದ ವಂಡರ್ ಲಾ ಗೆ ಹೋಗುವ ಹಾದಿಯಲ್ಲಿ ಮಂಚನಾಯಕನಹಳ್ಳಿಯ ರೈಲ್ವೆ ಸೇತುವೆ ಬಳಿ ಬೈಕ್‍ಗಳನ್ನು ನಿಲ್ಲಿಸಿ ಹಳಿ ಮೇಲೆ ನಿಂತುಕೊಂಡು ರೈಲಿಗೆ ಕಾದಿದ್ದಾರೆ.
ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲಿನ ಮುಂದೆ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ವೇಗವಾಗಿ ಬರುತ್ತಿದ್ದ ರೈಲು ಮೂವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರ ದೇಹವನ್ನು ಕೆಲ ದೂರದವರೆಗೆ ಎಳೆದುಕೊಂಡು ಹೋಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಬಿಡದಿ ಮತ್ತು ಚನ್ನಪಟ್ಟಣ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಚನ್ನಪಟ್ಟಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.