ಬೆಂಗಳೂರು/ಮೈಸೂರು: ಬುಧವಾರದಂದು ಇಂಧನ ಸಚಿವ ಡಿಕೆ ಶಿವಕುಮಾರ್‍ಗೆ ಶಾಕ್ ಕೊಟ್ಟಿದ್ದ ಐಟಿ ಅಧಿಕಾರಿಗಳು ಸತತ ಎರಡನೇ ದಿನವಾದ ಇಂದು ಕೂಡ ಪರಿಶೀಲನೆ ಮುಂದುವರೆಸಿದ್ದಾರೆ. ಆದ್ರೆ ಮನೆಯಲ್ಲಿನ ಲಾಕರ್ ಓಪನ್ ಮಾಡಲು ಡಿಕೆಶಿ ನಿರಾಕರಿಸಿದ್ದು, ಕೀ ಮೇಕರ್‍ಗಳನ್ನ ಕರೆಸಲಾಗಿದೆ.
ಒಟ್ಟು 5 ಲಾಕರ್‍ಗಳ ಪೈಕಿ ಈಗಾಗಲೇ 2 ಲಾಕರ್‍ಗಳನ್ನ ಓಪನ್ ಮಾಡಲಾಗಿದೆ. ಆದ್ರೆ ಮೂರು ಲಾಕರ್ ಗಳನ್ನು ಓಪನ್ ಮಾಡಲು ಡಿಕೆಶಿ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ನಕಲಿ ಕೀ ಮೇಕರ್‍ಗಳನ್ನ ಕರೆತಂದು ಲಾಕರ್‍ಗಳನ್ನು ಓಪನ್ ಮಾಡಿಸಿದ್ದಾರೆ. ಮೂರು ಲಾಕರ್‍ಗಳ ಪೈಕಿ ಇಂದು 2 ಲಾಕರ್‍ಗಳು ಓಪನ್ ಆಗಿವೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸದಲ್ಲಿ ಐಟಿ ಪರಿಶೀಲನೆ ನಡೆಯುತ್ತಿದೆ. ರಿಯಲ್ ಎಸ್ಟೇಟ್ ಕಂಪನಿಗಳ ದಾಖಲೆಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ದಾಖಲೆಗಳ ಬಗ್ಗೆ ವಿಡಿಯೋ ರೆಕಾರ್ಡಿಂಗ್ ಪ್ರಾರಂಭಿಸಿದ್ದಾರೆ. ವಿಡಿಯೋ ರೆಕಾರ್ಡಿಂಗ್ ನಲ್ಲಿ ಡಿಕೆಶಿ ರಿಯಲ್ ಎಸ್ಟೇಟ್ ಮತ್ತು ಬ್ಯಾಂಕ್ ವಹಿವಾಟಿನ ಬಗ್ಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಅತ್ತ ಮೈಸೂರು ನಗರದ ಇಟ್ಟಿಗೆಗೂಡು ಬಡಾವಣೆಯಲ್ಲಿರುವ ಸಚಿವ ಡಿ.ಕೆ.ಶಿವಕುಮಾರ್ ಮಾವ ತಿಮ್ಮಯ್ಯ ಅವರ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ 2ನೇ ದಿನವೂ ಮುಂದುವರೆದಿದೆ. ಮೈಸೂರಿನ ಇತಿಹಾಸದಲ್ಲೆ ಇಷ್ಟು ಸುದೀರ್ಘ ದಾಳಿ ಇದೇ ಪ್ರಥಮವಾಗಿದೆ. ಬುಧವಾರ ತಡರಾತ್ರಿವರೆಗೂ ದಾಖಲೆ ಪರಿಶೀಲನೆ ಮಾಡಿದ್ದ ಐಟಿ ಅಧಿಕಾರಿಗಳು, ಪರಿಶೀಲನೆ ಮುಗಿಯದ ಕಾರಣ ದಾಳಿ ಮಾಡಿದ ಮನೆಯಲ್ಲೆ ನಿದ್ರೆಗೆ ಜಾರಿದ್ರು. ದೆಹಲಿಯಿಂದ ಆಗಮಿಸಿದ್ದ ಮುಖ್ಯ ಅಧಿಕಾರಿ ಮಾತ್ರ ರಾತ್ರಿ ಮನೆಯಿಂದ ನಿರ್ಗಮಿಸಿದ್ರು. ಡಿಕೆಶಿ ಮಾವನ ಮನೆಯಲ್ಲಿದ್ದ ವ್ಯಕ್ತಿಗಳನ್ನ ಹೊರಬಿಡದೆ ಅಧಿಕಾರಿಗಳು ದಿಗ್ಭಂದನ ಹಾಕಿದ್ರು. ಆದ್ರೆ ಮಕ್ಕಳಿಗೆ ವಿನಾಯ್ತಿ ನೀಡಿದ ಅಧಿಕಾರಿಗಳು ನಿನ್ನೆ ಹಾಗೂ ಇಂದು ಶಾಲೆಗೆ ಹೋಗಲು ವಿನಾಯಿತಿ ನೀಡಿದ್ರು.
ಡಿಕೆಶಿ ಮಾವನ ಮನೆಯಲ್ಲಿ ಮತ್ತಷ್ಟು ದಾಖಲೆಗಳು ಪತ್ತೆಯಾಗಿವೆ. ರಹಸ್ಯ ಸ್ಥಳದಲ್ಲಿ ಇಟ್ಟಿದ್ದ 4 ಬ್ಯಾಗ್ ದಾಖಲೆಗಳನ್ನ ಐಟಿ ವಶಕ್ಕೆ ಪಡೆದಿದೆ. ಬರಿಗೈಯಲ್ಲಿ ಒಳಗೆ ಹೋದವರು ವಾಪಸ್ ಬಂದಾಗ 4 ಬ್ಯಾಗ್ ತಂದಿದ್ದಾರೆ. ಡಿಕೆಶಿ ಮಾವ ತಿಮ್ಮಯ್ಯನನ್ನು ಅಧಿಕಾರಿಗಳು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸ್ತಿದ್ದಾರೆ. ಬಾಮೈದ ಸತ್ಯನಾರಾಯಣ ಹಾಗೂ ಸೊಸೆಯನ್ನ ಐಟಿ ಟೀಂ ವಾಪಸ್ ಮನೆಗೆ ಕರೆತಂದಿದ್ದಾರೆ.