* 120 ಸ್ಥಾನಗಳಿಗೆ ಕೈ ಬೇಡಿಕೆ; 26 ಸ್ಥಾನಗಳಿಗೆ ಎಸ್ಪಿ ಒಪ್ಪಿಗೆ
* ನಾಳೆ ಎಸ್ಪಿಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ
ನವದೆಹಲಿ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (UP Elections) ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ (SP) ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಕಾಂಗ್ರೆಸ್ 120 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬೇಡಿಕೆ ಮುಂದಿಟ್ಟಿದ್ದರೆ, ಎಸ್ಪಿ ಆರಂಭಿಕವಾಗಿ 26 ಕ್ಷೇತ್ರಗಳನ್ನು ನೀಡುವ ಪ್ರಸ್ತಾವ ಮಾಡಿದೆ.
ಈ ನಡುವೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಯುತ್ತಿರುವ ಹೊತ್ತಲ್ಲೇ ಎಸ್ಪಿ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದು ಕಾಂಗ್ರೆಸ್ (Congress) ಆಕ್ರೋಶಕ್ಕೆ ಕಾರಣವಾಗಿದೆ. ಎಸ್ಪಿ ಬಿಡುಗಡೆ ಮಾಡಿರುವ ಮೊದಲ ಐದು ಅಭ್ಯರ್ಥಿಗಳ ಪಟ್ಟಿಯಲ್ಲಿ ಬೆಹಟ್ನಿಂದ ಉಮರ್ ಅಲಿ ಖಾನ್, ಸಹಾರನ್ಪುರ ಗ್ರಾಮೀಣ ಕ್ಷೇತ್ರದಿಂದ ಆಶು ಮಲಿಕ್, ಕೈರಾನಾದಿಂದ ನಾಹಿದ್ ಹಸನ್, ಅಮ್ರೋಹಾದಿಂದ ಮೆಹಬೂಬ್ ಅಲಿ ಹಾಗೂ ಲಲಿತ್ಪುರದಿಂದ ಜ್ಯೋತಿ ಲೋಧಿ ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಪೈಕಿ ಬೆಹಟ್ ಮತ್ತು ಸಹಾರನ್ಪುರ ಗ್ರಾಮೀಣ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕೂಡ ಆಸಕ್ತಿ ಹೊಂದಿದೆ. ವಿಶೇಷವಾಗಿ ಸಹಾರನ್ಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರ ರಾಜಕೀಯ ನೆಲೆ ಇರುವ ಪ್ರದೇಶದಲ್ಲಿ ಎಸ್ಪಿ ಅಭ್ಯರ್ಥಿಗಳನ್ನು ಘೋಷಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆಗಿನ ಮೈತ್ರಿ ಮಾತುಕತೆ ಅಂತಿಮಗೊಳ್ಳುವ ಮುನ್ನವೇ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಸ್ಪಿ
ಈ ಬೆಳವಣಿಗೆ ಕುರಿತು ಕಾಂಗ್ರೆಸ್ ಸಂಸದ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಇಮ್ರಾನ್ ಮಸೂದ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಾವು ಭಿಕ್ಷುಕರಲ್ಲ, ಅಖಿಲೇಶ್ ಯಾದವ್ ನೀಡುವ ಕ್ಷೇತ್ರಗಳಿಗಾಗಿ ಕಾಯುತ್ತಿಲ್ಲ. ಒಂದು ಕಡೆ ಮೈತ್ರಿ ಮಾತುಕತೆ ನಡೆಸುತ್ತಾ ಮತ್ತೊಂದೆಡೆ ಅಭ್ಯರ್ಥಿಗಳನ್ನು ಘೋಷಿಸುವುದಾದರೆ ಮೈತ್ರಿಯ ಉದ್ದೇಶವೇನು’ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದೂ ತಿಳಿಸಿದ್ದಾರೆ.
ಇನ್ನೊಂದೆಡೆ, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಸ್ಪಿ ತನ್ನ ‘ಜನ-ಮನ ಪ್ರಣಾಳಿಕೆ’ಯನ್ನು ನವೆಂಬರ್ 26ರ ಸಂವಿಧಾನ ದಿನದಂದು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ‘ಸತ್ತಾಯೀಸ್ ಕಾ ಸಂಕಲ್ಪ್: ಪಿಡಿಎ ಕಾ ಪ್ರಮಾಣಪತ್ರ’ ಎಂಬ ಹೆಸರಿನ ಈ ಪ್ರಣಾಳಿಕೆಯಲ್ಲಿ ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರ ಜೊತೆಗೆ ಮಹಿಳೆಯರು, ಯುವಕರು ಹಾಗೂ ಬಡವರ ಸಮಸ್ಯೆಗಳಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ.
ಮಹಿಳೆಯರಿಗೆ ವಾರ್ಷಿಕ 40 ಸಾವಿರ ಆರ್ಥಿಕ ನೆರವು ಅಥವಾ ಪಿಂಚಣಿ, ಗೃಹಬಳಕೆದಾರರಿಗೆ 300 ಯೂನಿಟ್ ಉಚಿತ ವಿದ್ಯುತ್, ಸ್ವಯಂ ಉದ್ಯೋಗ ಆರಂಭಿಸಲು 2 ಲಕ್ಷದವರೆಗೆ ಆರ್ಥಿಕ ನೆರವು ಹಾಗೂ ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಉಚಿತ ಮೆಟ್ರೊ ಪ್ರಯಾಣ ಸೇರಿದಂತೆ ಇನ್ನಿತರ ಪ್ರಸ್ತಾವಗಳೂ ವರದಿಯಾಗಿವೆ. ರಾಜ್ಯಮಟ್ಟದ ಪ್ರಣಾಳಿಕೆಯ ಜತೆಗೆ ಜಿಲ್ಲಾವಾರು ಮತ್ತು ಲಖನೌ ನಗರಕ್ಕೆ ಪ್ರತ್ಯೇಕ ಪ್ರಣಾಳಿಕೆ ರೂಪಿಸುವ ಸಿದ್ಧತೆಯೂ ನಡೆದಿದೆ. ಇದನ್ನೂ ಓದಿ: 2ನೇ ಸುತ್ತಿನ ಮಾತುಕತೆಗೂ ಮುನ್ನವೇ ಸೀಟುಗಳ ಡಿಮ್ಯಾಂಡ್ 130ಕ್ಕೆ ಇಳಿಸಿದ ಕಾಂಗ್ರೆಸ್; ʻAʼ ವರ್ಗದ ಸ್ಥಾನ ಹೆಚ್ಚಿಸಲು ಪಟ್ಟು
ಮಾಜಿ ಮುಖ್ಯ ಕಾರ್ಯದರ್ಶಿ ಅಲೋಕ್ ರಂಜನ್ ಅವರ ಮೇಲ್ವಿಚಾರಣೆಯಲ್ಲಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಸಂವಿಧಾನದ ರಕ್ಷಣೆ, ಪ್ರಜಾಪ್ರಭುತ್ವ, ಮೀಸಲಾತಿ, ಉದ್ಯೋಗ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಪ್ರಮುಖ ವಿಚಾರಗಳಾಗಿವೆ. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸುವ ಸಾಧ್ಯತೆಯಿದೆ.
