ದೋಹಾ: ಭಾರತ ಎ ತಂಡವು ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ರ ಐತಿಹಾಸಿಕ ಅಭಿಯಾನವನ್ನು 306 ರನ್ಗಳ ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ.
ತಿಲಕ್ ವರ್ಮಾ ಮತ್ತು ಕುಮಾರ್ ಕುಶಾಗ್ರ ಸ್ಫೋಟಕ ಶತಕ ಹಾಗೂ ಹರ್ಷಿತ್ ರಾಣಾ ಮತ್ತು ಪ್ರಿನ್ಸ್ ಯಾದವ್ ಮಾರಕ ಬೌಲಿಂಗ್ ನೆರವಿನಿಂದ ನೇಪಾಳ ವಿರುದ್ಧ ಭಾರತ ಜಯ ಸಾಧಿಸಿದೆ. ಟೀಂ ಇಂಡಿಯಾ ಎ ತಂಡದ 333 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ನೇಪಾಳ ತಂಡವು ಕೇವಲ 11.3 ಓವರ್ಗಳಲ್ಲಿ 26 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ವೇಗಿಗಳಾದ ಪ್ರಿನ್ಸ್ ಯಾದವ್ ಮತ್ತು ಹರ್ಷಿತ್ ರಾಣಾ ಬೌಲಿಂಗ್ನಲ್ಲಿ ಮೋಡಿ ಮಾಡಿದರು. ಪ್ರಿನ್ಸ್ ಐದು, ಹರ್ಷಿತ್ ನಾಲ್ಕು ವಿಕೆಟ್ಗಳನ್ನು ಪಡೆದರೆ, ಸ್ಪಿನ್ನರ್ ಶಹಬಾಜ್ ಅಹ್ಮದ್ ಅಂತಿಮ ವಿಕೆಟ್ ಪಡೆದರು.
ಇದಕ್ಕೂ ಮೊದಲು, ಭಾರತ 42/3 ರಿಂದ ಚೇತರಿಸಿಕೊಂಡು 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 332 ರನ್ ಗಳಿಸಿತು. ಸ್ಟಾರ್ ಓಪನರ್ಗಳಾದ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಉತ್ತಮ ಪ್ರದರ್ಶನ ನೀಡಲು ವಿಫಲರಾದರೂ, ನಾಯಕ ತಿಲಕ್ ವರ್ಮಾ (107) ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕುಮಾರ್ ಕುಶಾಗ್ರ (117) ಅವರ ಅದ್ಭುತ ಶತಕಗಳಿಂದ ಭಾರತ ತಂಡವು ಪಾರಾಯಿತು. ಸೂರ್ಯಾಂಶ್ ಶೆಡ್ಜ್ 14 ಎಸೆತಗಳಲ್ಲಿ 36 ರನ್ ಗಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು.
ನೇಪಾಳದ 26 ರನ್ಗಳು ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಐದನೇ ಕನಿಷ್ಠವಾಗಿದ್ದರೆ, ಭಾರತದ 306 ರನ್ಗಳ ಗೆಲುವಿನ ಅಂತರವು ಲಿಸ್ಟ್ ಎ ಇತಿಹಾಸದಲ್ಲಿ ಎಂಟನೇ ಅತಿ ಹೆಚ್ಚು ರನ್ಗಳಾಗಿವೆ.
