ಬಾಗಲಕೋಟೆ: ವಿಶ್ವಗುರು ಬಸವಣ್ಣನವರ(Basavanna) ಕುರಿತು ರವಿ ಹಂಜ್(Ravi Hanj) ಎಂಬುವವರು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಬಾಗಲಕೋಟೆ(Bagalkote) ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಬಸವ ಧರ್ಮ ಪೀಠವು( Basava Dharma Peetha) ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಸವ ಧರ್ಮ ಪೀಠಾಧ್ಯಕ್ಷೆ ಪೂಜ್ಯ ಮಾತೆ ಗಂಗಾದೇವಿ(Mate Gangadevi) ಅವರು, ಬಸವಣ್ಣನವರಿಗೆ ಅವಹೇಳನ ಮಾಡುವುದು ಮಲಗಿದ್ದ ಸಿಂಹವನ್ನು ಎಬ್ಬಿಸಿದಂತೆ. ಈಗ ಕೇವಲ ಪುಸ್ತಕ ಬಿಡುಗಡೆಯ ವಿಚಾರ ಗೊತ್ತಾದಾಗಲೇ ಇಷ್ಟೊಂದು ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಆ ಪುಸ್ತಕವನ್ನು ಓದಿದರೆ ಇನ್ನೆಷ್ಟು ತೀವ್ರ ಸ್ವರೂಪದ ಹೋರಾಟ ನಡೆಯಬಹುದು ಎಂಬುದನ್ನು ಯೋಚಿಸಿ ಮಾತನಾಡಬೇಕು ಎಂದು ಹೇಳಿದರು.
ರವಿ ಹಂಜ್ ಅವರು ತಮ್ಮ ಈ ವರ್ತನೆಯನ್ನು ಹೀಗೆಯೇ ಮುಂದುವರಿಸಿದರೆ, ಬಸವ ಧರ್ಮ ಪೀಠ, ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಸೇರಿದಂತೆ ಎಲ್ಲಾ ಬಸವ ಪರ ಸಂಘಟನೆಗಳು ಬೀದಿಗಿಳಿದು ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾತೆ ಗಂಗಾದೇವಿ ಅವರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪ್ರತಿ ವಾಕ್ಯಕ್ಕೂ ಐತಿಹಾಸಿಕ ಸಾಕ್ಷಿ ಪುರಾವೆಗಳಿವೆ, ಜೈಲಿಗೆ ಹೋಗಲು ಸಿದ್ಧ: ಲೇಖಕ ರವಿ ಹಂಜ್
ರವಿ ಹಂಜ್ ಅವರ ಮಾತು ಮತ್ತು ಅವರು ಬಳಸಿದ ಭಾಷೆಯನ್ನು ಕೇಳಿದಾಗ ಮನಸ್ಸಿಗೆ ತೀವ್ರ ನೋವಾಗಿದೆ. ಇದರಿಂದ ರಾಜ್ಯದ ಎಲ್ಲಾ ಬಸವ ಪರ ಸಂಘಟನೆಗಳಿಗೂ ಅಪಾರ ವೇದನೆಯಾಗಿದೆ. ವೈದ್ಯರು ನಾಲಿಗೆಯನ್ನು ನೋಡಿ ಹೊಟ್ಟೆಯ ಕಾಯಿಲೆಯನ್ನು ಕಂಡುಹಿಡಿಯುವಂತೆ, ಒಬ್ಬ ವ್ಯಕ್ತಿ ಬಳಸುವ ಮಾತುಗಳನ್ನು ನೋಡಿದಾಗ ಆತನ ಮನಸ್ಥಿತಿ ಎಂತಹದ್ದು ಎಂಬುದು ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನ್ ಚೇತನ, ಜಾತಿ, ಮತ, ಪಂಥ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಅನುಭವ ಮಂಟಪದಲ್ಲಿ ಸಮಾನ ಅವಕಾಶ ಕಲ್ಪಿಸಿಕೊಟ್ಟವರು ಬಸವವಣ್ಣ. ಸಾಮಾನ್ಯ ಗುರುವನ್ನೇ ನಾವು ಏಕವಚನದಲ್ಲಿ ಹಾಗೂ ಅಶ್ಲೀಲವಾಗಿ ಮಾತನಾಡುವುದಿಲ್ಲ. ಅಂತಹದ್ದರಲ್ಲಿ ಸ್ವತಂತ್ರ ಹಾಗೂ ಪರಿಪೂರ್ಣ ಲಿಂಗಾಯತ ಧರ್ಮದ ಧರ್ಮಪಿತಾ ಬಸವಣ್ಣನವರಿಗೆ ಅವಹೇಳನ ಮಾಡಿರುವುದನ್ನು ಎಂದಿಗೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
