– ನೀವೂ ನೋಡಬೇಕಾ… ಜಟಾಯು ಅರ್ತ್ ಸೆಂಟರ್ಗೆ ತಲುಪೋದು ಹೇಗೆ?
ತಿರುವನಂತಪುರಂ: ಕನ್ನಡಿಗ ʻಯಶ್ʼ ನಟನೆಯ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಬಿಡುಗಡೆಯೊಂದಿಗೆ ಕೇರಳದ ಜಟಾಯು ಅರ್ತ್ ಸೆಂಟರ್ (Jatayu Earth’s Centre) ಮತ್ತೊಮ್ಮೆ ದೇಶದ ಗಮನ ಸೆಳೆದಿದೆ. ಇಲ್ಲಿರುವ ಬೃಹತ್ ಜಟಾಯು ಶಿಲ್ಪವು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಈ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಕುರಿತು ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ (Suresh Gopi) ಸುಳಿವು ನೀಡಿದ್ದಾರೆ. ಮೊದಲು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಕೊಲ್ಲಂ ಜಿಲ್ಲೆಯಲ್ಲಿರುವ ಜಟಾಯು ಅರ್ತ್ ಸೆಂಟರ್ಗೆ ಭೇಟಿ ನೀಡಲಿದ್ದು, ಬಳಿಕ ಪ್ರಧಾನಿ ಮೋದಿ ಅವರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಭೇಟಿ ದಿನಾಂಕ, ಸಮಯ ಇನ್ನೂ ನಿಗಧಿಯಾಗಿಲ್ಲ.
ಈ ಪ್ರಸ್ತಾವಿತ ಭೇಟಿಯ ಕುರಿತು ಮಾತನಾಡಿದ ಸುರೇಶ್ ಗೋಪಿ, ಎರಡು ದಿನಗಳ ಹಿಂದೆ ಗಜೇಂದ್ರ ಸಿಂಗ್ ಶೇಖಾವತ್ ಅವರು ಜಟಾಯು ಭೂಮಿ ಕೇಂದ್ರದ ಸೃಷ್ಟಿಕರ್ತ ರಾಜೀವ್ ಆಂಚಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ದೆಹಲಿ ಬಿಯೆನ್ನಾಲೆಯಲ್ಲಿ ಜಟಾಯು ಶಿಲ್ಪದ ಕಲಾಕೃತಿಯನ್ನ ಪ್ರದರ್ಶಿಸುವ ಆಸಕ್ತಿಯನ್ನೂ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.
ಗಜೇಂದ್ರ ಸಿಂಗ್ ಶೇಖಾವತ್ ಅವರು ಜಟಾಯು ಅರ್ತ್ ಸೆಂಟರ್ಗೆ ಭೇಟಿ ನೀಡಲಿದ್ದಾರೆ ಎಂದು ನನಗೆ ತಿಳಿದಿದೆ. ದೆಹಲಿ ಬಿಯೆನ್ನಾಲೆಯಲ್ಲಿ ಜಟಾಯುವಿನ ಉಪಸ್ಥಿತಿಯನ್ನು ಹೊಂದುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಪ್ರಧಾನಮಂತ್ರಿಯವರ ಗಮನಕ್ಕೂ ತರಲಾಗಿದೆ ಎಂದು ಸುರೇಶ್ ಗೋಪಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಮಾಯಣದ ಜಟಾಯುವಿಗೂ ಈ ಬೆಟ್ಟಕ್ಕೂ ಇರುವ ನಂಟೇನು?
ರಾಮಾಯಣದ ಪೌರಾಣಿಕ ಕಥೆಯ ಪ್ರಕಾರ, ರಾವಣನು ಸೀತಾದೇವಿಯನ್ನು ಅಪಹರಿಸಿಕೊಂಡು ಲಂಕೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ʻಜಟಾಯುʼ ತನ್ನ ಪ್ರಾಣವನ್ನ ಪಣಕ್ಕಿಟ್ಟು ಸೀತೆಯನ್ನು ರಕ್ಷಿಸಲು ಹೋರಾಡುತ್ತಾನೆ. ಈ ಹೋರಾಟದಲ್ಲಿ ರಾವಣನಿಂದ ಸೋಲನುಭವಿಸಿದ ಜಟಾಯು, ಚಡಯಮಂಗಲಂನ ಬೆಟ್ಟದ ತುದಿಯಲ್ಲಿ ಬಿದ್ದು ಗಾಯಗೊಳ್ಳುತ್ತಾನೆ ಎಂಬ ನಂಬಿಕೆಯಿದೆ. ನಂತರ ಶ್ರೀರಾಮನಿಗೆ ಸೀತೆಯ ಅಪಹರಣದ ವಿಚಾರವನ್ನು ತಿಳಿಸಿದ ಜಟಾಯು, ಅದೇ ಸ್ಥಳದಲ್ಲಿ ಕೊನೆಯುಸಿರೆಳೆಯುತ್ತಾನೆ ಎಂಬ ಪ್ರತೀತಿ ಇದೆ. ಈ ಪೌರಾಣಿಕ ಹಿನ್ನೆಲೆಯ ಕಾರಣದಿಂದಲೇ ಬೆಟ್ಟದ ಮೇಲಿರುವ ಜಟಾಯು ಶಿಲ್ಪವು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.
ಜಟಾಯು ಅರ್ತ್ ಸೆಂಟರ್ ಯೋಜನೆಗೆ 2004ರಲ್ಲಿ ಅನುಮೋದನೆ ದೊರೆತಿತ್ತು. ಖ್ಯಾತ ಚಲನಚಿತ್ರ ನಿರ್ದೇಶಕ, ಶಿಲ್ಪಿ ಹಾಗೂ ಕಲಾವಿದ ರಾಜೀವ್ ಆಂಚಲ್ ಅವರ ಪರಿಕಲ್ಪನೆ, ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಈ ಪರಿಸರ ಪ್ರವಾಸೋದ್ಯಮ ಯೋಜನೆ ರೂಪುಗೊಂಡಿದೆ.
ಜಟಾಯು ಅರ್ತ್ ಸೆಂಟರ್ಗೆ ತಲುಪೋದು ಹೇಗೆ?
ಜಟಾಯು ಪಕ್ಷಿ ಶಿಲ್ಪ ವೀಕ್ಷಣೆಗೆ ತೆರಳಲು ವಿಮಾನ, ರೈಲು ಹಾಗೂ ರಸ್ತೆ ಮಾರ್ಗಗಳು ಇವೆ.
1. ವಿಮಾನ ಮಾರ್ಗ: ಸಮೀಪದ ವಿಮಾನ ನಿಲ್ದಾಣ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿಂದ ಜಟಾಯು ಅರ್ತ್ ಸೆಂಟರ್ಗೆ ಸುಮಾರು 50 ರಿಂದ 55 ಕಿಲೋಮೀಟರ್ ದೂರವಿದೆ. ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಮೂಲಕ ಚಡಯಮಂಗಲಂ ತಲುಪಬಹುದು.
2. ರೈಲು ಮಾರ್ಗ: ಸಮೀಪದ ಪ್ರಮುಖ ರೈಲು ನಿಲ್ದಾಣ ಕೊಲ್ಲಂ ಜಂಕ್ಷನ್. ಇಲ್ಲಿಂದ ಜಟಾಯು ಅರ್ತ್ ಸೆಂಟರ್ಗೆ ಸುಮಾರು 37 ಕಿಲೋಮೀಟರ್ ದೂರವಿದೆ. ರೈಲು ನಿಲ್ದಾಣದಿಂದ ಟ್ಯಾಕ್ಸಿ ಹಾಗೂ ಬಸ್ಗಳ ಸೌಲಭ್ಯ ಲಭ್ಯವಿದೆ.
3. ರಸ್ತೆ ಮಾರ್ಗ: ತಿರುವನಂತಪುರಂನಿಂದ ಸುಮಾರು 50 ರಿಂದ 55 ಕಿಲೋಮೀಟರ್, ಕೊಲ್ಲಂನಿಂದ ಸುಮಾರು 37 ಕಿಲೋಮೀಟರ್ ಹಾಗೂ ಕೊಚ್ಚಿಯಿಂದ ಸುಮಾರು 150 ರಿಂದ 160 ಕಿಲೋಮೀಟರ್ ದೂರದಲ್ಲಿ ಜಟಾಯು ಅರ್ತ್ ಸೆಂಟರ್ ಇದೆ.


