ದಾವಣಗೆರೆ: ಜಿಲ್ಲೆಯಲ್ಲಿ (Davanagere) ಬರದಿಂದ (Drought) ಬೋರ್ವೆಲ್ಗಳಲ್ಲಿನ (Borewell) ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆಲವು ಬೋರ್ ವೆಲ್ಗಳಲ್ಲಿ ಸಂಪೂರ್ಣವಾಗಿ ನೀರು ಖಾಲಿಯಾಗಿದೆ. ಇದರಿಂದ ಕಂಗೆಟ್ಟ ರೈತರು (Farmers) ಹೊಸ ಬೋರ್ವೆಲ್ ಕೊರೆಸಲು ಹೋದರೆ ಏಜೆನ್ಸಿಗಳು ದುಪ್ಪಟ್ಟು ಹಣ ವಸೂಲಿ ಮಾಡಿ ಬಡವರ ರಕ್ತ ಹೀರುತ್ತಿವೆ.
ಮಳೆ ಕೊರತೆಯಿಂದ ಅಂತರ್ಜಲ 7 ಮೀಟರ್ಗೂ ಹೆಚ್ವು ಕುಸಿದಿದೆ. ಇದರಿಂದ ಬೋರ್ವೆಲ್ಗಳಲ್ಲಿ ನೀರು ಖಾಲಿಯಾಗುತ್ತಿದೆ. ಈ ಹಿನ್ನೆಲೆ ಬೋರ್ವೆಲ್ ಕೊರೆಯುವ ಯಂತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ದುಪ್ಪಟ್ಟು ಹಣ ನೀಡಿ ರೈತರು ಬೋರ್ ಕೊರೆಸುತ್ತಿದ್ದಾರೆ. ಇದನ್ನೂ ಓದಿ: ಬಸ್ ಆಸನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯಾಣಿಕರು – ಕಿಕ್ಕಿರಿದು ತುಂಬುವ ಜನಸಂದಣಿಗೆ ಬ್ರೇಕ್!
ರೈತರ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡು ಏಜನ್ಸಿಗಳು ಬೇಕಾಬಿಟ್ಟಿ ದರ ನಿಗದಿ ಮಾಡುತ್ತಿವೆ. ಕಳೆದ ಬಾರಿಗಿಂತ ಸುಮಾರು 1.50 ಲಕ್ಷ ರೂ. ಹಣವನ್ನು ಹೆಚ್ಚಿಸಲಾಗಿದೆ. ಕಳೆದ ಒಂದು ತಿಂಗಳ ಹಿಂದೆ 900 ಅಡಿಗೆ 1.60 ಲಕ್ಷ ರೂ. ತೆಗೆದುಕೊಂಡಿದ್ದ ಬೋರ್ವೆಲ್ ಏಜೆನ್ಸಿಗಳು ಈಗ 2.50 ಲಕ್ಷ ರೂ. ತೆಗೆದುಕೊಳ್ಳುತ್ತಿವೆ.
ಪ್ರತಿ ನೂರು ಅಡಿಗೆ ಕಳೆದ ಒಂದು ತಿಂಗಳ ಹಿಂದಿನ ದರಕ್ಕಿಂತ ಮೂರರಷ್ಟು ಹೆಚ್ಚು ಪಟ್ಟು ದರ ಏರಿಸಲಾಗಿದೆ. ಇದರಿಂದ ಸಿಟ್ಟಿಗೆದ್ದ ರೈತರು ದಾವಣಗೆರೆ ತಾಲೂಕಿನ ಸಿದ್ದನೂರು ಗ್ರಾಮದಲ್ಲಿ ಬೋರ್ವೆಲ್ ಲಾರಿಯನ್ನು ತಡೆದು ಏಜನ್ಸಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯ ಎಲ್ಲಾ ಬೋರ್ವೆಲ್ ಏಜನ್ಸಿಗಳು ಸಮಾನವಾದ ದರ ನಿಗದಿಪಡಿಸುವಂತೆ ಆಗ್ರಹಿಸಿದ್ದಾರೆ.
ನೀರಿಲ್ಲದೆ ಅಡಿಕೆ ತೋಟಗಳು ಕಣ್ಣೆದುರೇ ಒಣಗಿ ಹೋಗುತ್ತಿವೆ. ಬೋರ್ವೆಲ್ ನಲ್ಲಿ ನೀರು ಇಲ್ಲದೇ ಅನಿವಾರ್ಯವಾಗಿ ಬೋರ್ವೆಲ್ ಕೊರೆಸಬೇಕಾಗಿದೆ. ಜಿಲ್ಲಾಧಿಕಾರಿಗಳು ಬೋರ್ವೆಲ್ ಏಜೆನ್ಸಿಗಳ ದರ ಏರಿಕೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಬರದಿಂದ ತತ್ತರಿಸಿದ ರೈತರು ಸಾಲ ಹೆಚ್ಚಾಗಿ ಇತ್ತ ಬೆಳೆ ಉಳಿಸಿಕೊಳ್ಳದೇ ಅತ್ಯಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳ ಬಿಸಿ ಊಟಕ್ಕೆ ಕನ್ನ: ಹಾವೇರಿಯಲ್ಲಿ ಗ್ರಾಮಸ್ಥರಿಂದ ಅಕ್ಕಿ ದಾನ, ವಿಜಯಪುರದಲ್ಲಿ 3 ತಿಂಗಳ ರೇಷನ್ ಗೋಲ್ಮಾಲ್
