ನವದೆಹಲಿ: ದೇಶಾದ್ಯಂತ ನವೆಂಬರ್ 21 ರಿಂದ ಡಿಸೆಂಬರ್ 15ರ ನಡುವೆ ಅಂದಾಜು 52 ಲಕ್ಷ ಮದುವೆಗಳು (Marriage) ನಡೆಯುವ ನಿರೀಕ್ಷೆ ಇದೆ. ಇದರಿಂದ ಅಂದಾಜು 7.5 ಲಕ್ಷ ಕೋಟಿಯಷ್ಟು ವಹಿವಾಟು (Business) ನಡೆಯಲಿದೆ ಎಂದು ಅಖಿಲ ಭಾರತ ವರ್ತಕರ ಸಂಘ (CAIT) ಹೇಳಿದೆ.
ಈ 25 ದಿನಗಳ ಮದುವೆ ಋತುವಿನಲ್ಲಿ ಪ್ರತಿ ದಿನ ಸರಾಸರಿ 2 ಲಕ್ಷಕ್ಕೂ ಹೆಚ್ಚು ಮದುವೆಗಳು ದೇಶದಲ್ಲಿ ನಡೆಯಲಿವೆ. ರಿಟೇಲ್, ತಯಾರಿಕೆ, ಅತಿಥ್ಯ, ಸಾರಿಗೆ, ಆಹಾರ, ಆಭರಣ ಮತ್ತು ಇತರೆ ವಲಯಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ದೆಹಲಿ-ಎನ್ಸಿಆರ್ನಲ್ಲಿಯೇ ಸುಮಾರು 5 ಲಕ್ಷದಷ್ಟು ಮದುವೆಗಳು ನಡೆಯುವ ಅಂದಾಜಿದ್ದು, 2.5 ಲಕ್ಷ ಕೋಟಿಯಷ್ಟು ವಹಿವಾಟು ನಡೆಯುವ ನಿರೀಕ್ಷೆಯಿದೆ ಎಂದು ಸಿಎಐಟಿ ಮಾಹಿತಿ ನೀಡಿದೆ.
ಸರಕು ಮತ್ತು ರಿಟೇಲ್ ಖರೀದಿಗೆ 4.05 ಲಕ್ಷ ಕೋಟಿ ಖರ್ಚಾದ್ರೆ, ಇತರ ಸೇವೆಗಳಿಗೆ ಉಳಿದ 3.45 ಲಕ್ಷ ಕೋಟಿ ಖರ್ಚಾಗಲಿದೆ ಎಂದು ತಿಳಿಸಿದೆ.
ದೇಶದ 25 ರಾಜ್ಯಗಳಲ್ಲಿ 300ಕ್ಕೂ ಹೆಚ್ಚು ಪ್ರಮುಖ ವ್ಯಾಪಾರಿಗಳು ಮತ್ತು 550 ವ್ಯಾಪಾರ ಸಂಘಗಳೊಂದಿಗೆ ಸಮಾಲೋಚನೆ ನಡೆಸಿ, ಸಿಎಐಟಿಯ ಸಂಶೋಧನಾ ವಿಭಾಗವು ಈ ಮಾಹಿತಿ ಸಂಗ್ರಹಿಸಿದೆ. ಅಷ್ಟೇ ಅಲ್ಲದೇ ಮದುವೆ ಋತುವಿನಲ್ಲಿ ಅಂದಾಜು 1.25 ಕೋಟಿಯಷ್ಟು ತಾತ್ಕಾಲಿಕ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದಿದೆ ವರ್ತಕರ ಸಂಘ.
ಕ್ಯಾಟರಿಂಗ್, ಅಲಂಕಾರ (ಡೆಕೊರೇಷನ್), ಫೋಟೋಗ್ರಫಿ, ಆತಿಥ್ಯ, ಸಾರಿಗೆ, ಈವೆಂಟ್ ಮ್ಯಾನೇಜ್ ಮೆಂಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದು ಸಂಘ ತಿಳಿಸಿದೆ.
ಕಳೆದ ವರ್ಷಗಳಲ್ಲಿ ಆದ ಮದುವೆ – ಅಂದಾಜು ವ್ಯವಹಾರ
ವರ್ಷ – ಮದುವೆಗಳು ವಹಿವಾಟು
2022 – 32 ಲಕ್ಷ ಮದುವೆ – 3.7 ಲಕ್ಷ ಕೋಟಿ ರೂ.
2023 – 38 ಲಕ್ಷ ಮದುವೆ – 4.74 ಲಕ್ಷ ಕೋಟಿ ರೂ.
2024 – 48 ಲಕ್ಷ ಮದುವೆ – 5.90 ಲಕ್ಷ ಕೋಟಿ ರೂ.
2025 – 46 ಲಕ್ಷ ಮದುವೆ – 6.50 ಲಕ್ಷ ಕೋಟಿ ರೂ.

