ನವದೆಹಲಿ: ತಮಿಳುನಾಡು(Tamil Nadu) ಸರ್ಕಾರಕ್ಕೆ ಸುಪ್ರೀಂಕೋರ್ಟ್ನಲ್ಲಿ (Supreme Court) ಶುಕ್ರವಾರ ತೀವ್ರ ಮುಖಭಂಗವಾಗಿದೆ. ಕರ್ನಾಟಕದಿಂದ (Karnataka) ಬಾಕಿ ಇರುವ 11 ಟಿಎಂಸಿ ಹೆಚ್ಚುವರಿ ನೀರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿದ್ದ ಎರಡು ಮಧ್ಯಂತರ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶಗಳನ್ನು ಕರ್ನಾಟಕ ಪಾಲಿಸುತ್ತಿಲ್ಲ ಎಂದು ಆರೋಪಿಸಿ, ನೀರು ಬಿಡುಗಡೆಗೆ ನಿರ್ದೇಶನ ನೀಡುವಂತೆ ತಮಿಳುನಾಡು ಕೋರಿತ್ತು. ಆದರೆ, ನ್ಯಾಯಾಲಯವು ಕರ್ನಾಟಕಕ್ಕೆ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿ, “ನಾವು ಅರ್ಜಿಗಳನ್ನು ವಜಾಗೊಳಿಸಿದ್ದೇವೆ” ಎಂದು ಸ್ಪಷ್ಟಪಡಿಸಿದೆ.
ಅಂತರರಾಜ್ಯ ಗಡಿಯಲ್ಲಿರುವ ಬಿಳಿಗುಂಡ್ಲು ಅಳತೆ ಕೇಂದ್ರದಲ್ಲಿ ಅಕ್ಟೋಬರ್ 6ರವರೆಗೆ ತಮಿಳುನಾಡಿಗೆ ತಲುಪಬೇಕಿದ್ದ ನೀರಿನಲ್ಲಿ 11.719 ಟಿಎಂಸಿ ಕೊರತೆಯಾಗಿದೆ ಎಂದು ತಮಿಳುನಾಡು ವಾದಿಸಿತ್ತು. ಕರ್ನಾಟಕದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದರೂ ನೀರು ಬಿಡುಗಡೆ ಮಾಡುತ್ತಿಲ್ಲ, ಇದರಿಂದ ಕೃಷಿಗೆ ಅನಾನುಕೂಲವಾಗುತ್ತಿದೆ ಎಂದು ಆರೋಪಿಸಿತ್ತು.
ಮಳೆಯ ಕೊರತೆಯಿಂದಾಗಿ ತಮಗೆ ಹಂಚಿಕೆಯಾದ ಪಾಲಿನ ನೀರು(Cauvery Water) ಕರ್ನಾಟಕದಿಂದ ಬಂದಿಲ್ಲ ಮತ್ತು ಸುಮಾರು 11 ಟಿಎಂಸಿ ನೀರಿನ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ, ಇದರಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ತಮಿಳುನಾಡು ಕಳೆದ ಆಗಸ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ, ತಮಿಳುನಾಡಿನ ಆರೋಪಗಳನ್ನು ತಳ್ಳಿಹಾಕಿದ್ದ ಕರ್ನಾಟಕ ಸರ್ಕಾರ, ತಾನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶಗಳನ್ನು ಚಾಚೂತಪ್ಪದೆ ಪಾಲಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿತ್ತು.
ಇದೇ ವೇಳೆ, ತಮಿಳುನಾಡು ಸರ್ಕಾರ ಇಂದು ಮತ್ತೊಂದು ಹೊಸ ಅರ್ಜಿಯನ್ನು ಸಲ್ಲಿಸಿದ್ದು, ಇದರಲ್ಲಿ ಕರ್ನಾಟಕದ ಜೊತೆಗೆ ಕೇರಳ ಮತ್ತು ಪುದುಚೇರಿ ರಾಜ್ಯಗಳನ್ನೂ ಪ್ರತಿವಾದಿಗಳನ್ನಾಗಿ ಸೇರಿಸಿದೆ. ಈ ಅರ್ಜಿ ಸಲ್ಲಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಪೀಠವು, “ಇನ್ನು ಎಷ್ಟು ಅರ್ಜಿಗಳನ್ನು ಸಲ್ಲಿಸುತ್ತೀರಿ?” ಎಂದು ತಮಿಳುನಾಡು ಪರ ವಕೀಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಪರ ವಕೀಲರು, “ಇದು ಪ್ರತ್ಯೇಕ ಅರ್ಜಿಯಾಗಿದ್ದು, ಇದರಲ್ಲಿ ಕೇರಳ ಮತ್ತು ಪುದುಚೇರಿಯನ್ನು ಹೊಸದಾಗಿ ಸೇರಿಸಲಾಗಿದೆ” ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಬಳಿಕ ನ್ಯಾಯಾಲಯವು ಈ ಹೊಸ ಅರ್ಜಿಯ ವಿಚಾರಣೆಯನ್ನು ಮುಂದಿನ ವಾರ ನಡೆಸುವುದಾಗಿ ತಿಳಿಸಿದೆ.
