ಭುವನೇಶ್ವರ: ಅಕ್ವಾನ್ (Akvan Cyclone) ಚಂಡಮಾರುತವು ಇಂದು ಬೆಳಗ್ಗೆ ಒಡಿಶಾ(Odisha) ಮತ್ತು ಉತ್ತರ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದೆ. ಒಡಿಶಾದ ಗೋಪಾಲಪುರ ಸಮೀಪ ಬೆಳಗ್ಗೆ 7:30 ರಿಂದ 8:30ರ ನಡುವೆ ಚಂಡಮಾರುತವು ಕರಾವಳಿ ದಾಟಿದೆ.
ಹವಾಮಾನ ಇಲಾಖೆಯ ಮಾಪನದಲ್ಲಿ ನಾಲ್ಕನೇ ಅತ್ಯುನ್ನತ ವರ್ಗವಾದ ತೀವ್ರ ಚಂಡಮಾರುತ (Severe Cyclonic Storm) ಎಂದು ಗುರುತಿಸಲ್ಪಟ್ಟಿದ್ದ ಅಕ್ವಾನ್, ಕರಾವಳಿಗೆ ಅಪ್ಪಳಿಸುವ ಮುನ್ನ ಅಂದರೆ ಮುಂಜಾನೆ 2:30ರ ಸುಮಾರಿಗೆ ಕೊಂಚ ದುರ್ಬಲಗೊಂಡು ಸಾಮಾನ್ಯ ಚಂಡಮಾರುತವಾಗಿ ಮಾರ್ಪಟ್ಟಿದೆ. ಗೋಪಾಲಪುರ ಸಮೀಪ ಕರಾವಳಿ ದಾಟುವಾಗ ಗಂಟೆಗೆ 70 ರಿಂದ 80 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದ್ದು, ಗಾಳಿಯ ರಭಸ ಗಂಟೆಗೆ 90 ಕಿ.ಮೀ. ವರೆಗೂ ತಲುಪಿದೆ. ಕಳೆದ 24 ದಿನಗಳಲ್ಲಿ ಒಡಿಶಾವನ್ನು ಬೆದರಿಸುತ್ತಿರುವ ಮೂರನೇ ಚಂಡಮಾರುತ ಇದಾಗಿದೆ.
#WATCH | Odisha: As the landfall process of Cyclone Akvan begins, the district administration has further tightened safety measures along the seashore.
Meanwhile, rough seas and strong winds conditions persist at the Puri beach. https://t.co/bnfDJJXMO9
— ANI (@ANI) November 20, 2026
3 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ
ಚಂಡಮಾರುತದಿಂದ ಉಂಟಾಗಬಹುದಾದ ಹಾನಿಯನ್ನು ತಪ್ಪಿಸಲು ಸರ್ಕಾರ ಸಮರೋಪಾದಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಗುರುವಾರ ಸಂಜೆಯ ವೇಳೆಗೆ ಅಪಾಯದ ಪ್ರದೇಶಗಳಲ್ಲಿದ್ದ ಸುಮಾರು 2.98 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, 2,523 ಪರಿಹಾರ ಶಿಬಿರಗಳಲ್ಲಿಆಶ್ರಯ ನೀಡಲಾಗಿದೆ.
ಸಂಭಾವ್ಯ ಪೀಡಿತ ಜಿಲ್ಲೆಗಳಲ್ಲಿ ಒಟ್ಟು 9,341 ಚಂಡಮಾರುತ ಆಶ್ರಯ ತಾಣಗಳನ್ನು ಸಜ್ಜುಗೊಳಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ಎನ್ಡಿಆರ್ಎಫ್ (NDRF) ಮತ್ತು ಎಸ್ಡಿಆರ್ಎಫ್ (SDRF) ಸೇರಿದಂತೆ ಒಟ್ಟು 423 ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ.
ಚಂಡಮಾರುತದ ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಇಲಾಖೆ ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ಪೂರ್ವ ಕರಾವಳಿ ರೈಲ್ವೆ (East Coast Railway) ವಲಯದಲ್ಲಿ 41 ರೈಲುಗಳನ್ನು ರದ್ದುಗೊಳಿಸಲಾಗಿದ್ದು 29 ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ. ಆಗ್ನೇಯ ರೈಲ್ವೆ (South Eastern Railway) ವಲಯವು ಶುಕ್ರವಾರ ಪುರಿಗೆ ತೆರಳುವ ಅಥವಾ ಪುರಿ ಮಾರ್ಗವಾಗಿ ಸಂಚರಿಸುವ ಕನಿಷ್ಠ 28 ಎಕ್ಸ್ಪ್ರೆಸ್ ರೈಲುಗಳನ್ನು ರದ್ದುಗೊಳಿಸಿದೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ಮುಂದಿನ 24 ಗಂಟೆಗಳ ಕಾಲ ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುವ ಆತಂಕವಿದೆ.
