ನ್ಯೂಯಾರ್ಕ್: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಪ್ರಮುಖ ಕೃತಕ ಬುದ್ಧಿಮತ್ತೆ (AI) ಸಂಶೋಧನೆ ಮತ್ತು ತಂತ್ರಜ್ಞಾನ ಕಂಪನಿ ಆಂಥ್ರಾಪಿಕ್ (Anthropic) ತನ್ನ ಐತಿಹಾಸಿಕ ಐಪಿಒ (IPO) ಮೂಲಕ ಸಾರ್ವಜನಿಕ ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಒಟ್ಟು 81.3 ಶತಕೋಟಿ ಡಾಲರ್(7.58 ಲಕ್ಷ ಕೋಟಿ ರೂ.) ಬಂಡವಾಳವನ್ನು ಸಂಗ್ರಹಿಸುವ ಮೂಲಕ ವಿಶ್ವದ ಅತಿದೊಡ್ಡ ಐಪಿಒ ಎಂಬ ದಾಖಲೆ ಬರೆದಿದೆ.
ಕ್ಲಾಡ್ (Claude) ಎಐ ತಯಾರಕ ಸಂಸ್ಥೆಯಾದ ಆಂಥ್ರಾಪಿಕ್, ನವೆಂಬರ್ 19 ರಂದು ಅಮೆರಿಕದ ನಾಸ್ಡಾಕ್ (Nasdaq) ಷೇರು ವಿನಿಮಯ ಕೇಂದ್ರದಲ್ಲಿ ಅಧಿಕೃತವಾಗಿ ವಹಿವಾಟು ಆರಂಭಿಸಿದೆ. ಈ ಮೂಲಕ ಜೂನ್ 2026 ರಲ್ಲಿ ಸ್ಪೇಸ್ಎಕ್ಸ್ (SpaceX) ನಿರ್ಮಿಸಿದ್ದ 75 ಶತಕೋಟಿ ಡಾಲರ್ ಐಪಿಒ ದಾಖಲೆಯನ್ನು ಆಂಥ್ರಾಪಿಕ್ ಮುರಿದಿದೆ.
ನಾಸ್ಡಾಕ್ ಗ್ಲೋಬಲ್ ಸೆಲೆಕ್ಟ್ ಮಾರ್ಕೆಟ್ನಲ್ಲಿ ANT ಹೆಸರಿನ ಸಂಕೇತದ ಅಡಿಯಲ್ಲಿ ಷೇರುಗಳು ವಹಿವಾಟಾಗುತ್ತಿವೆ. ಆರಂಭದಲ್ಲಿ ಪ್ರತಿ ಷೇರಿಗೆ 70 ರಿಂದ 78 ಡಾಲರ್ ಬೆಲೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಹೂಡಿಕೆದಾರರ ಭಾರಿ ಬೇಡಿಕೆಯಿಂದಾಗಿ ಪ್ರತಿ ಷೇರು 83 ಡಾಲರ್ ಅಂತಿಮ ಬೆಲೆಯನ್ನು ನಿಗದಿ ಪಡಿಸಲಾಯಿತು. ಮಾರುಕಟ್ಟೆ ಆರಂಭವಾದಾಗ ಪ್ರತಿ ಷೇರು 111.50 ಡಾಲರ್ಗೆ ಲಿಸ್ಟ್ ಆಯಿತು. ಬೇಡಿಕೆ ಜಾಸ್ತಿ ಇದ್ದ ಕಾರಣ ವಿತರಣಾ ಬೆಲೆಗಿಂತ ಸುಮಾರು 34.3% ಹೆಚ್ಚು ಬೆಲೆಗೆ ಲಿಸ್ಟ್ ಆಗಿತ್ತು.
ಕಂಪನಿಯು ಪ್ರತಿ ಷೇರಿಗೆ 83 ಡಾಲರ್ನಂತೆ ಒಟ್ಟು 98 ಕೋಟಿ ಕ್ಲಾಸ್ A ಷೇರುಗಳನ್ನು ಮಾರಾಟ ಮಾಡಿದೆ. ಇದರಲ್ಲಿ 95.63 ಕೋಟಿ ಹೊಸ ಷೇರುಗಳನ್ನು ಕಂಪನಿಯು ನೀಡಿದೆ.ಇದರಿಂದ ಕಂಪನಿಗೆ ಸುಮಾರು 79.4 ಬಿಲಿಯನ್ ಡಾಲರ್ ನೇರ ಬಂಡವಾಳ ಸಿಕ್ಕಿದೆ. ಉಳಿದ 2.36 ಕೋಟಿ ಷೇರುಗಳನ್ನು ಹಳೆಯ ಹೂಡಿಕೆದಾರರು ಮಾರಾಟ ಮಾಡಿದ್ದಾರೆ.
ಐಪಿಒ ಜೊತೆಗೆ ಎನ್ವಿಡಿಯಾ (NVIDIA), ಗೂಗಲ್ (Google), ಮೈಕ್ರೋಸಾಫ್ಟ್, ಎಎಮ್ಡಿ (AMD), ಬ್ರಾಡ್ಕಾಮ್, ಮೈಕ್ರಾನ್ ಮತ್ತು TSMC ಕಂಪನಿಗಳು ಪ್ರತ್ಯೇಕವಾಗಿ 26 ಬಿಲಿಯನ್ ಡಾಲರ್ ಮೌಲ್ಯದ ‘ಕ್ಲಾಸ್ N’ ಷೇರುಗಳನ್ನು 83 ಡಾಲರ್ ಬೆಲೆಯಲ್ಲಿ ಖರೀದಿಸಲು ಒಪ್ಪಂದ ಮಾಡಿಕೊಂಡಿವೆ. ಇದರಿಂದ ಒಟ್ಟು ಬಂಡವಾಳ ಸಂಗ್ರಹಣೆ 107.3 ಬಿಲಿಯನ್ ಡಾಲರ್ ತಲುಪಿದೆ. ಇದನ್ನೂ ಓದಿ: Jio IPO| 2,868 ರೂ. ಲಾಭದೊಂದಿಗೆ ಲಿಸ್ಟಿಂಗ್ – ಭಾರತದ 2ನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದ ಜಿಯೋ
2026 ರ ಮೊದಲ ಒಂಬತ್ತು ತಿಂಗಳಲ್ಲಿ ಆಂಥ್ರಾಪಿಕ್ 33.24 ಶತಕೋಟಿ ಡಾಲರ್ ಆದಾಯವನ್ನು ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 1,200 ರಷ್ಟು ಭಾರಿ ಬೆಳವಣಿಗೆ ದಾಖಲಿಸಿದೆ.
ಕಂಪನಿಯು ಕಂಪ್ಯೂಟಿಂಗ್ ಮೂಲಸೌಕರ್ಯಕ್ಕಾಗಿ ಸುಮಾರು 895 ಶತಕೋಟಿ ಡಾಲರ್ ವೆಚ್ಚದ ಒಪ್ಪಂದಗಳನ್ನು ಮಾಡಿಕೊಂಡಿದೆ. ಅಲ್ಲದೆ, ಅಮೆಜಾನ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳು ಆಂಥ್ರಾಪಿಕ್ನಲ್ಲಿ ಹೂಡಿಕೆದಾರರಾಗಿಯೂ, ಕ್ಲೌಡ್ ಪೂರೈಕೆದಾರರಾಗಿಯೂ ಮತ್ತು ಪ್ರತಿಸ್ಪರ್ಧಿಗಳಾಗಿಯೂ ಕಾರ್ಯನಿರ್ವಹಿಸುತ್ತಿರುವುದು ಹೂಡಿಕೆದಾರರ ಗಮನ ಸೆಳೆದಿದೆ.
