-75 ವರ್ಷದ ಕೂಲಿ ಕಾರ್ಮಿಕನಿಗೆ ವಿದ್ಯುತ್ ಕಂಪನಿಯಿಂದ ನೋಟಿಸ್
-ಹಣ ಪಾವತಿಸದಿದ್ದರೆ ಜೈಲು ಬೆದರಿಕೆ
ಭೋಪಾಲ್: ಮನೆಯಲ್ಲಿ ಟಿವಿಯೂ ಇಲ್ಲ, ಫ್ಯಾನೂ ಇಲ್ಲ. ವಿದ್ಯುತ್ ಬಳಸುವ ಇತರ ಯಾವುದೇ ಉಪಕರಣಗಳೂ ಇಲ್ಲ. ರಾತ್ರಿ ಬೆಳಕಿಗಾಗಿ ಒಂದೇ ಒಂದು ಬಲ್ಬ್ ಬಳಸುವ 75 ವರ್ಷದ ಕೂಲಿ ಕಾರ್ಮಿಕನಿಗೆ ವಿದ್ಯುತ್ ಕಂಪನಿ ಬರೋಬ್ಬರಿ 1.39 ಲಕ್ಷ ರೂ. ಬಿಲ್ ನೀಡಿರುವ ಘಟನೆ ಮಧ್ಯಪ್ರದೇಶದ (Madhyapradesh) ಸಾಗರ್ (Sagar) ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬೆಹರಿಯಾ ಸಾನಿ ಗ್ರಾಮದ ನಿವಾಸಿ ದೂಲಿಚಂದ್ (75) ಎಂಬುವವರಿಗೆ 1,39,232 ರೂ. ವಿದ್ಯುತ್ ಬಾಕಿ ಬಿಲ್ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಆದರೆ, ತಮ್ಮ ಮನೆಯಲ್ಲಿ ಅಧಿಕೃತ ವಿದ್ಯುತ್ ಸಂಪರ್ಕವೇ ಇಲ್ಲ ಎಂದು ದೂಲಿಚಂದ್ ಆರೋಪಿಸಿದ್ದಾರೆ. ಇದನ್ನೂ ಓದಿ: ಬೇಲೂರಿನಲ್ಲಿ 2ನೇ ದಿನವೂ ವಿಫಲವಾದ ಕಾಡಾನೆ ಸೆರೆ ಕಾರ್ಯಾಚರಣೆ
ದೂಲಿಚಂದ್ ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಸ್ವಂತ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಗುಡಿಸಲಿನಲ್ಲಿ ಒಂದೇ ಒಂದು ಬಲ್ಬ್ ಹೊರತುಪಡಿಸಿ ಬೇರೆ ಯಾವುದೇ ವಿದ್ಯುತ್ ಉಪಕರಣಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬಂದಿರುವುದು ಅವರನ್ನು ಆತಂಕಕ್ಕೆ ದೂಡಿದೆ.
ಮಧ್ಯಪ್ರದೇಶ ಪೂರ್ವ ಕ್ಷೇತ್ರ ವಿದ್ಯುತ್ ವಿತರಣಾ ಕಂಪನಿಯ ಬೆಹರಿಯಾ ವಿತರಣಾ ಕೇಂದ್ರದಿಂದ 2020ರ ಆಗಸ್ಟ್ನಲ್ಲಿ ಮೊದಲ ಬಾರಿಗೆ ಅವರ ಹೆಸರಿನಲ್ಲಿ ವಿದ್ಯುತ್ ಬಿಲ್ ನೀಡಲಾಗಿತ್ತು ಎನ್ನಲಾಗಿದೆ. ಬಳಿಕ 2022ರ ಡಿಸೆಂಬರ್ 20ರಂದು 4,226 ರೂಪಾಯಿ ಪಾವತಿಸುವಂತೆ ನೋಟಿಸ್ ನೀಡಲಾಗಿತ್ತು. ಸಮಸ್ಯೆ ಬಗೆಹರಿಯದ ಹಿನ್ನೆಲೆ 2026ರ ಸೆಪ್ಟೆಂಬರ್ 10ರಂದು ಮತ್ತೆ 1,39,232 ರೂಪಾಯಿ ಪಾವತಿಸುವಂತೆ ವಸೂಲಿ ನೋಟಿಸ್ ಜಾರಿಗೊಳಿಸಲಾಗಿದೆ.ಇದನ್ನೂ ಓದಿ: ವಿಜಯಪುರ | ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ
ಇದಲ್ಲದೆ, ವಿದ್ಯುತ್ ಕಂಪನಿಯ ಸಿಬ್ಬಂದಿ ಮನೆಗೆ ಬಂದು ಬಿಲ್ ಪಾವತಿಸುವಂತೆ ಒತ್ತಡ ಹೇರುತ್ತಿದ್ದು, ಹಣ ಕಟ್ಟದಿದ್ದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂಲಿಚಂದ್ ಆರೋಪಿಸಿದ್ದಾರೆ. ತಮ್ಮ ಒಪ್ಪಿಗೆಯಿಲ್ಲದೆ ಗುಡಿಸಲಿನಲ್ಲಿ ವಿದ್ಯುತ್ ಮೀಟರ್ ಅಳವಡಿಸಲಾಗಿದ್ದು, ಅದು ಕೂಡ ಸ್ಥಗಿತಗೊಂಡಿದೆ ಎಂದು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಸಾಗರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ತೆರಳಿದ ದೂಲಿಚಂದ್, ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ಹೆಸರಿನಲ್ಲಿ ನೀಡಿರುವ ತಪ್ಪಾದ ವಿದ್ಯುತ್ ಬಿಲ್ ಮತ್ತು ವಸೂಲಿ ನೋಟಿಸ್ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. ಗುಡಿಸಲಿನಲ್ಲಿ ಅಳವಡಿಸಿರುವ ಮೀಟರ್ ತೆರವುಗೊಳಿಸಿ, ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿದ್ದಾರೆ. ವೃದ್ಧನ ದೂರನ್ನು ಆಲಿಸಿದ ಜಿಲ್ಲಾಧಿಕಾರಿ, ವಿದ್ಯುತ್ ಕಂಪನಿ ಅಧಿಕಾರಿಗಳಿಗೆ ಪ್ರಕರಣದ ಸಮಗ್ರ ತನಿಖೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.ಇದನ್ನೂ ಓದಿ: ಮಗುವನ್ನು ಶಾಲೆಗೆ ಕಳುಹಿಸುವ ನೆಪದಲ್ಲಿ ಹಣ ಸಾಗಾಟಕ್ಕೆ ಯತ್ನ – ಅರಣ್ಯಾಧಿಕಾರಿ ಮನೆ ಸೇರಿ ಐದು ಕಡೆ ಲೋಕಾಯುಕ್ತ ದಾಳಿ
