ಮೈಸೂರು: ಸರಗಳ್ಳತನದ ಆರೋಪದ ಸುತ್ತ ಶುರುವಾದ ಗಲಾಟೆ ಈಗ ಹಲ್ಲೆ ಪ್ರಕರಣವಾಗಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸಂಬಂಧ ಎರಡು ಎಫ್ಐಆರ್ ದಾಖಲಾಗಿವೆ. ಇದರ ಡಿಟೈಲ್ಸ್ ಇಲ್ಲಿದೆ.
ಮೈಸೂರಿನ (Mysuru) ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಸಿ. ನಗರದ ಕವಿತಾ ಬೇಕರಿ ಸರ್ಕಲ್ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಯುವತಿಯೊಬ್ಬಳ ಚೈನ್ ಕದಿಯಲು ಯತ್ನಿಸಿದನೆಂದು ಯುವಕನೊಬ್ಬನನ್ನು ಸ್ಥಳೀಯ ಪುನೀತ್ ಮತ್ತು ಆತನ ಸ್ನೇಹಿತರು ಹಿಡಿದಿದ್ದರು. ಆಗ ವಿಷಯ ತಿಳಿದು ಯುವಕನ ಕಡೆಯವರು ಬಂದು ತಪ್ಪಾಗಿದೆ ಎಂದು ಹೇಳಿ ಯುವಕನನ್ನು ಬಿಡಿಸಿ ಕೊಂಡು ಹೋಗಿದ್ದಾರೆ. ಇದಾದ ಬಳಿಕವೇ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.
ತನ್ನನ್ನು ಹಿಡಿದ ಪುನೀತ್ ವಿರುದ್ಧ ಆಕ್ರೋಶಗೊಂಡ ಯುವಕ ತನ್ನ ಕಡೆಯವರನ್ನು ಕರೆಸಿಕೊಂಡಿದ್ದಾನೆ. ಬಳಿಕ ಗುಂಪಾಗಿ ಬಂದ ಯುವಕರು ಪುನೀತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪುನೀತ್ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ನಡೆದಿದೆ. ಇದನ್ನೂ ಓದಿ: ಚೈನ್ ಕಳ್ಳನನ್ನು ಹಿಡಿದುಕೊಟ್ಟ ಯುವಕನ ಮೇಲೆಯೇ ಹಲ್ಲೆ – ಮೈಸೂರಿನಲ್ಲಿ ಹಿಂದೂಗಳಿಂದ ಪ್ರತಿಭಟನೆ
ಘಟನೆ ಬಳಿಕ ಹಲ್ಲೆಗೊಳಗಾದ ಪುನೀತ್ ಹಾಗೂ ಸ್ಥಳೀಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ರಸ್ತೆಯಲ್ಲಿ ಕುಳಿತು ಆರೋಪಿಗಳನ್ನು ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಘಟನೆ ಸಂಬಂಧ ಮಾಹಿತಿ ತಿಳಿಯುತ್ತಿದ್ದಂತೆ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಸ್ಥಳೀಯರಿಂದ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಪುನೀತ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ. ಚೈನ್ ಕಳ್ಳತನಕ್ಕೆ ಯತ್ನಿಸಿದನೆಂದು ಆರೋಪಿಸಿ ಯುವಕನನ್ನು ಹಿಡಿದಿದ್ದೇವೆ ಎಂಬ ದೂರಿನ ಆಧಾರದ ಮೇಲೆ ಒಂದು ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ, ತಾನು ಚೈನ್ ಕಳ್ಳತನ ಮಾಡುತ್ತೇನೆಂದು ಸುಳ್ಳು ಆರೋಪ ಮಾಡಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಅಪ್ರಾಪ್ತನ ವಿರುದ್ಧ ಎಫ್ಐಆರ್ ದಾಖಲಾಗಿದ್ದರೆ, ಹಲ್ಲೆಗೊಳಗಾದ ಪುನೀತ್ ಮತ್ತು ಆತನ ಸ್ನೇಹಿತ ಸಂತೋಷ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಎರಡೂ ಕಡೆಯವರಿಂದ ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಪೆಟ್ರೋಲ್ಗೆ ಎಥೆನಾಲ್ ಮಿಶ್ರಣದ ಬಗ್ಗೆ ಕೇಂದ್ರಕ್ಕೆ ನಾಳೆ ವರದಿ ಸಲ್ಲಿಸುತ್ತೇನೆ: ರಿಜ್ವಾನ್ ಅರ್ಷದ್
ಒಂದೆಡೆ ಚೈನ್ ಕಳ್ಳತನಕ್ಕೆ ಯತ್ನಿಸಿದ ಆರೋಪ. ಮತ್ತೊಂದೆಡೆ ಸುಳ್ಳು ಆರೋಪ ಮಾಡಿ ಹಲ್ಲೆ ನಡೆಸಿದ ಪ್ರತಿದೂರು. ಹೀಗಾಗಿ ಅಸಲಿಗೆ ಅಂದು ರಾತ್ರಿ ನಡೆದಿದ್ದೇನು ಎಂಬ ಪ್ರಶ್ನೆ ಈಗ ಎದುರಾಗಿದೆ. ಚೈನ್ ಕಳ್ಳತನಕ್ಕೆ ಯತ್ನಿಸಲಾಗಿತ್ತಾ? ಅಥವಾ ತಪ್ಪು ಕಲ್ಪನೆಯಿಂದ ಗಲಾಟೆ ಶುರುವಾಯಿತಾ ಎಂಬ ಪ್ರಶ್ನೆ ಮೂಡಿದೆ.
