ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇದೇ ನವೆಂಬರ್ 16 ಮತ್ತು 17ರಂದು ಫಿಲಿಪೈನ್ಸ್ ಗೆ (Philippines) ಎರಡು ದಿನಗಳ ಅಧಿಕೃತ ಭೇಟಿ ನೀಡಲಿದ್ದಾರೆ. ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ಈ ಭೇಟಿ ನಡೆಯಲಿದೆ.
ಈ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ನವೆಂಬರ್ 17ರಂದು ಫಿಲಿಪೈನ್ಸ್ ಆತಿಥ್ಯದಲ್ಲಿ ನಡೆಯಲಿರುವ 23ನೇ ASEAN-ಭಾರತ ಶೃಂಗಸಭೆ ಹಾಗೂ 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ (EAS) ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಭಾರತ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ASEAN) 2026ನೇ ವರ್ಷವನ್ನು ‘ASEAN-ಭಾರತ ಕಡಲ ಸಹಕಾರ ವರ್ಷ’ ಎಂದು ಆಚರಿಸುತ್ತಿರುವ ಹಿನ್ನೆಲೆ ಈ ಭೇಟಿ ವಿಶೇಷ ಮಹತ್ವ ಪಡೆದುಕೊಂಡಿದೆ. ಅಲ್ಲದೇ, 2027ರಲ್ಲಿ ಭಾರತ ಮತ್ತು ASEAN ನಡುವಿನ ಸಂವಾದ ಸಂಬಂಧಗಳಿಗೆ 35 ವರ್ಷಗಳು ಹಾಗೂ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ 5 ವರ್ಷಗಳು ಪೂರ್ಣಗೊಳ್ಳಲಿವೆ.
ಈ ಭೇಟಿಯ ವೇಳೆ ಕಡಲ ಸಹಕಾರ ಬಲಪಡಿಸುವುದು, ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ವಿಸ್ತರಿಸುವುದು ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಸಹಭಾಗಿತ್ವವನ್ನು ಹೆಚ್ಚಿಸುವ ಕುರಿತು ಪ್ರಮುಖ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.
ಜೊತೆಗೆ 23ನೇ ASEAN-ಭಾರತ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು 10 ಸದಸ್ಯ ರಾಷ್ಟ್ರಗಳನ್ನ ಒಳಗೊಂಡ ASEAN ಒಕ್ಕೂಟದೊಂದಿಗಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯನ್ನೂ ಪರಿಶೀಲಿಸಲಿದ್ದಾರೆ. ಇದರೊಂದಿಗೆ ಭವಿಷ್ಯದ ಸಹಕಾರದ ಮಾರ್ಗಗಳು ಹಾಗೂ 2026ರಿಂದ 2030ರ ವರೆಗಿನ ASEAN-ಭಾರತ ಕ್ರಿಯಾ ಯೋಜನೆಯ ಅನುಷ್ಠಾನ ಕುರಿತು ನಾಯಕರು ಚರ್ಚೆ ನಡೆಸುವ ನಿರೀಕ್ಷೆಯಿದೆ.

