– 15 ಲಕ್ಷ ಪ್ರಯಾಣಿಕರಿಗೆ ತೊಂದರೆ
ವಾಷಿಂಗ್ಟನ್: ದೂರಸಂಪರ್ಕ (Telecom) ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗಿ, ಅಮೆರಿಕದಾದ್ಯಂತ ವಿಮಾನಗಳ ನಿರ್ಗಮನಕ್ಕೆ ವಿಧಿಸಲಾಗಿದ್ದ ರಾಷ್ಟ್ರವ್ಯಾಪಿ ನಿರ್ಬಂಧವನ್ನ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತೆರವುಗೊಳಿಸಿದೆ.
ನಿರ್ಬಂಧ ತೆರವುಗೊಂಡ ಬೆನ್ನಲ್ಲೇ ವಿಮಾನಗಳ (Flights) ಹಾರಾಟ ಪುನರಾರಂಭಿಸಲು ಅವಕಾಶ ದೊರೆತಿದ್ದು, ಗಂಟೆಗಟ್ಟಲೆ ವಿಮಾನ ನಿಲ್ದಾಣಗಳಲ್ಲಿ ಕಾಯುತ್ತಿದ್ದ ಸಾವಿರಾರು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
The @FAAnews issued a nationwide ground stop for all U.S. airports following a communication issue impacting all Air Route Traffic Control Centers. FAA technicians are investigating the issue. We will provide immediate updates as we have them.
— Secretary Sean Duffy (@SecDuffy) November 13, 2026
15 ಲಕ್ಷ ಪ್ರಯಾಣಿಕರಿಗೆ ತೊಂದರೆ
ಅಮೆರಿಕದ (America) ವಿವಿಧ ವಿಮಾನ ನಿಲ್ದಾಣಗಳಲ್ಲಿ ಸುಮಾರು 11,000 ವಿಮಾನಗಳ ಹಾರಾಟ ವಿಳಂಬಗೊಂಡಿದ್ದು, ಕೆಲವು ವಿಮಾನಗಳ ಸಂಚಾರ ರದ್ದಾಗಿದೆ. ಇದರಿಂದ ಅಂದಾಜು 15 ಲಕ್ಷ ಪ್ರಯಾಣಿಕರು ತೊಂದರೆಗೊಳಗಾಗಿದ್ದಾರೆ ಎಂದು ವಿಮಾನಯಾನ ಡಾಟಾ ಸಂಸ್ಥೆ Cirium ತಿಳಿಸಿದೆ. ಈ ಘಟನೆಯು ಅಮೆರಿಕದ ವಿಮಾನಯಾನ ಮೂಲಸೌಕರ್ಯ ವ್ಯವಸ್ಥೆಯ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆಯೂ ಆತಂಕ ಮೂಡಿಸಿದೆ. ಆರಂಭದಲ್ಲಿ ವಿಮಾನ ಸಂಚಾರವನ್ನು ಸಹಜ ಸ್ಥಿತಿಗೆ ತರಲು ಎಷ್ಟು ಸಮಯ ಬೇಕಾಗಬಹುದು ಎಂಬುದರ ಕುರಿತು ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ ಎಂದು ಹೇಳಲಾಗಿದೆ.
ವಿಮಾನಗಳ ಹಾರಾಟ ಸ್ಥಗಿತಕ್ಕೆ ಕಾರಣವೇನು?
ಅಮೆರಿಕದ ಎಲ್ಲಾ ಏರ್ ರೂಟ್ ಟ್ರಾಫಿಕ್ ಕಂಟ್ರೋಲ್ ಸೆಂಟರ್ಗಳ (ARTCC) ಸಂವಹನ ವ್ಯವಸ್ಥೆಯಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಈ ಹಿನ್ನೆಲೆ FAA ವಿಮಾನಗಳ ನಿರ್ಗಮನವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿತ್ತು. ನೆಟ್ವರ್ಕ್ ರೌಟರ್ಗಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಈ ವ್ಯತ್ಯಯ ಉಂಟಾಗಿದ್ದು, ಅದು ಹಂತ ಹಂತವಾಗಿ ದೇಶದಾದ್ಯಂತದ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಗೆ ಹರಡಿದೆ ಎಂದು ವಿಮಾನಯಾನ ಸಂಸ್ಥೆಯ ಮೂಲಗಳು ತಿಳಿಸಿವೆ. ಈಹಿನ್ನೆಲೆ ಸಂಜೆ ವೇಳೆಯವರೆಗೂ ವಿಮಾನಗಳ ಹಾರಾಟ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಪ್ರಮುಖ ವಿಮಾನಯಾನ ಸಂಸ್ಥೆಗಳಿಗೆ ಮುನ್ನೆಚ್ಚರಿಕೆ ನೀಡಲಾಗಿತ್ತು.
ಆ ಸಂದರ್ಭದಲ್ಲಿ 4,042 ವಿಮಾನಗಳು ಹಾರಾಟ ನಡೆಸುತ್ತಿದ್ದವು, ಅಮೆರಿಕದ ವಿವಿಧ ವಿಮಾನ ನಿಲ್ದಾಣಗಳತ್ತ ಪ್ರಯಾಣಿಸುತ್ತಿದ್ದವು ಎಂದು Flightradar24 ವರದಿ ಮಾಡಿದೆ. ಆಕಾಶದಲ್ಲಿದ್ದ ವಿಮಾನಗಳು ತಮ್ಮ ನಿಗದಿತ ಸ್ಥಾನಗಳತ್ತ ಪ್ರಯಾಣ ಮುಂದುವರಿಸಲು ಅವಕಾಶ ನೀಡಲಾಗಿತ್ತು. ಆದರೆ, ಹೊಸದಾಗಿ ವಿಮಾನ ನಿಲ್ದಾಣಗಳಿಂದ ಹೊರಡಬೇಕಿದ್ದ ವಿಮಾನಗಳ ನಿರ್ಗಮನವನ್ನ ಸಂಪೂರ್ಣವಾಗಿ ತಡೆಹಿಡಿಯಲಾಗಿತ್ತು. ಸದ್ಯ ವಿಮಾನ ಟೇಕಾಫ್ಗೆ ವಿಧಿಸಿದ್ದ ನಿರ್ಬಂಧಗಳನ್ನು ತೆವುಗೊಳಿಸಲಾಗಿದ್ದು, ಮತ್ತೆ ಹಾರಾಟ ನಡೆಸಲು ಮುಂದಾಗಿವೆ.
ಇದರಿಂದ ವಿವಿಧ ಏರ್ಪೊರ್ಟ್ಗಳಲ್ಲಿ ಗಂಟೆಗಟ್ಟಲೇ ಕಾದು ಕುಳಿತಿದ್ದ ಲಕ್ಷಾಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

