ದೀಪಾವಳಿ ಆಚರಣೆಯ ವೇಳೆ ನಾನ್ವೆಜ್ (Non veg) ಆಹಾರವನ್ನು ತಯಾರಿಸಿ (Diwali) ಬಡಿಸಿದ್ದಕ್ಕೆ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಮೆರಿಕದ ಲಾಸ್ ಏಂಜಲೀಸ್ನಲ್ಲಿರುವ ತಮ್ಮ ಮನೆಯಲ್ಲಿ ದೀಪಾವಳಿ ಆಚರಿಸಿದ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಚಿತ್ರಗಳ ಬೆನ್ನಲ್ಲೇ ಅವರು ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದ್ದಾರೆ. ದೀಪಾವಳಿ ಆಚರಣೆಯ ವೇಳೆ ಮಾಂಸಾಹಾರಿ ಆಹಾರವನ್ನು ತಯಾರಿಸಿ ಬಡಿಸಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಅವರು ಹಂಚಿಕೊಂಡಿರುವ ಫೋಟೋಗಳಲ್ಲಿ ಮನೆಯ ಅಲಂಕಾರ, ಸಾಂಪ್ರದಾಯಿಕ ಉಡುಗೆ, ಕುಟುಂಬದೊಂದಿಗಿನ ಸಂಭ್ರಮ ಮತ್ತು ಹಬ್ಬಕ್ಕಾಗಿ ಸಿದ್ಧಪಡಿಸಿದ ಆಹಾರದ ಚಿತ್ರಗಳಿವೆ. ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಕೆಲವರು, ಹಿಂದೂಗಳ ಪವಿತ್ರ ಹಬ್ಬವಾದ ದೀಪಾವಳಿಯಂದು ಮಾಂಸಾಹಾರಿ ಆಹಾರ ಸೇವಿಸುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಆಹಾರದ ವಿಚಾರ ಮಾತ್ರವಲ್ಲದೆ ಪ್ರಿಯಾಂಕಾ ಅವರ ಹಬ್ಬದ ಉಡುಗೆ, ಆಭರಣ ಮತ್ತು ಕೇಶವಿನ್ಯಾಸದ ಬಗ್ಗೆಯೂ ಕೆಲವರು ಟೀಕೆ ಮಾಡಿದ್ದಾರೆ. ಸಾಂಪ್ರದಾಯಿಕ ದೀಪಗಳ ಬದಲಿಗೆ ಮೇಣದಬತ್ತಿಗಳನ್ನು ಬಳಸಿದ್ದೇಕೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಈ ಟೀಕೆಗಳಿಗೆ ಪ್ರಿಯಾಂಕಾ ಚೋಪ್ರಾ ಈವರೆಗೆ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ.
ಅಮೆರಿಕದಲ್ಲಿ ನೆಲೆಸಿದ್ದರೂ ಪ್ರಿಯಾಂಕಾ ಚೋಪ್ರಾ ಭಾರತೀಯ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ತಮ್ಮ ಕುಟುಂಬಕ್ಕೆ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪರಿಚಯಿಸುವ ಕ್ಷಣಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.ಇದನ್ನೂ ಓದಿ: ಕೋರ್ಟ್ ಆದೇಶದ ಬೆನ್ನಲ್ಲೇ ದರ್ಶನ್ಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ
ಇತ್ತೀಚೆಗೆ ದಸರಾ ಹಬ್ಬದ ಸಂದರ್ಭದಲ್ಲೂ ಲಾಸ್ ಏಂಜಲೀಸ್ನ ತಮ್ಮ ಮನೆಯಲ್ಲಿ ನಡೆದ ಪೂಜೆ, ಶಿವಲಿಂಗ ಅಭಿಷೇಕ, ಹವನ ಮತ್ತು ಪೂಜೆಯ ಚಿತ್ರಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದರು.
ಮಗಳಿಗೆ ಹಿಂದೂ ಶ್ಲೋಕಗಳನ್ನು ಕಲಿಸುವುದು ಸೇರಿದಂತೆ ಭಾರತೀಯ ಸಂಪ್ರದಾಯಗಳನ್ನು ಪರಿಚಯಿಸುವ ಹಲವು ಕ್ಷಣಗಳನ್ನೂ ಪ್ರಿಯಾಂಕಾ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಮುಂದುವರಿದ ಯಶ್ ನಟನೆಯ ‘ರಾಮಾಯಣ’ ಅಬ್ಬರ; 6 ದಿನಗಳಲ್ಲಿ 823 ಕೋಟಿ ರೂ. ಕಲೆಕ್ಷನ್
