ಬೆಂಗಳೂರು: ಗುರುವಾರ ನಡೆದ ಸಂಪುಟ ಸಭೆಯಲ್ಲಿ ಎಸ್ಐಆರ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ರಾಜ್ಯದಲ್ಲಿ ಎಸ್ಐಆರ್ ಅಚ್ಚುಕಟ್ಟಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸರ್ಕಾರಕ್ಕೆ ಎಸ್ಐಆರ್ ಜಿಜ್ಞಾಸೆ, ದೆಹಲಿ ನಾಯಕರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲಿದೆ. ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಿದೆ. ಎಸ್ಐಆರ್ಗೆ ಮುನ್ನ ಮತದಾರರ ಪಟ್ಟಿಯನ್ನ ಪರಿಗಣಿಸಬೇಕೇ ಅಥವಾ ಎಸ್ಐಆರ್ ನಂತರದ ಮತದಾರರ ಪಟ್ಟಿಯನ್ನು ಪರಿಗಣಿಸಬೇಕೆಂಬ ಎಂಬ ವಿಚಾರವಾಗಿ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ.
ಅಚ್ಚರಿ ಎಂದರೆ ಬಹುತೇಕ ಸಚಿವರು ತಮ್ಮ ಅಭಿಪ್ರಾಯ ದಾಖಲು ಮಾಡಿದ್ದು, ‘ಬೇರೆ ರಾಜ್ಯದಲ್ಲಿ ಎಸ್ಐಆರ್ ಹೇಗೆ ನಡೆಯಿತೋ ತಿಳಿಯದು, ನಮ್ಮಲ್ಲಂತೂ ಅಚ್ಚುಕಟ್ಟಾಗಿ ನಡೆದಿದೆ’ ಎಂದಿದ್ದಾರಂತೆ. ಕೆಲವು ಸಣ್ಣಪುಟ್ಟ ವ್ಯತ್ಯಾಸ ಇರಬಹುದು. ಆದರೆ 5.5 ಕೋಟಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವಾಗ ಸಹಜ. ಹೀಗಾಗಿ, ಈ ಮತದಾರರ ಪಟ್ಟಿಯನ್ನೇ ಸ್ಥಳೀಯ ಸಂಸ್ಥೆ ಚುನಾವಣೆಗೆ ಬಳಸಿಕೊಳ್ಳುವದು ಸೂಕ್ತ ಎಂದು ಕೆಲವು ಸಚಿವರ ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ಎಸ್ಐಆರ್ ಮೂಲಕ ಸಿದ್ಧವಾದ ಮತದಾರರ ಪಟ್ಟಿಯನ್ನು ಬಳಸಿಕೊಂಡರೆ ಪ್ರತಿಪಕ್ಷಕ್ಕೆ ಆಹಾರ ಕೊಟ್ಟಂತೆ. ಇಷ್ಟೆಲ್ಲ ಹೋರಾಟ ಮಾಡಿಯೂ ಆ ಪಟ್ಟಿಯನ್ನು ಬಳಸಿಕೊಳ್ಳಲು ರಾಜ್ಯ ಚುನಾವಣೆ ಆಯೋಗಕ್ಕೆ ಅನುಮತಿ ನೀಡಿದರೆ ಬೇರೆ ರೀತಿ ಸಂದೇಶ ಹೋಗಬಹುದು. ಅಲ್ಲದೇ ಇಂಡಿಯಾ ಬ್ಲಾಕ್ ಒಕ್ಕೂಟದ ಪಕ್ಷಗಳಲ್ಲಿ ಬೇರೆ ಅಭಿಪ್ರಾಯ ಮೂಡಬಹುದು ಎಂಬ ವಾದವನ್ನೂ ಕೆಲ ಸಚಿವರು ಮುಂದಿಟ್ಟಿದ್ದಾರೆ. ದೆಹಲಿ ನಾಯಕರೊಂದಿಗೆ ತಕ್ಷಣವೇ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಸಿಎಂ ಬರಲಿದ್ದಾರೆ. ಸಿಎಂ ಮಾತಿಗೆ ಎಲ್ಲ ಸಚಿವರಿಂದ ಸಮ್ಮತಿ ವ್ಯಕ್ತವಾಗಿದೆ.
ಸರ್ಕಾರದ ಮುಂದಿರುವ ಸಾಧ್ಯತೆಗಳೇನು?
* ಎಸ್ಐಆರ್ಗೆ ಮುನ್ನ ಕೇಂದ್ರ ಚುನಾವಣೆ ಆಯೋಗ ಸಿದ್ಧಪಡಿಸಿದ್ದ ಮತದಾರರ ಪಟ್ಟಿಯನ್ನು ಬಳಸಿಕೊಂಡು ಕನಿಷ್ಠ ಅವಧಿಯಲ್ಲಿ ಪರಿಷ್ಕರಣೆ ಮಾಡಿಕೊಳ್ಳುವುದು.
* ಎಸ್ಐಆರ್ ಬಳಿಕ ಸಿದ್ಧವಾಗಿರುವ ಮತದಾರರ ಪಟ್ಟಿಯನ್ನು ಬಳಸಿ ಪರಿಷ್ಕರಣೆಗೆ ಅವಕಾಶ ನೀಡಿ ಕೈಬಿಟ್ಟು ಹೋದವರ ಹೆಸರು ಸೇರಿಸಿಕೊಳ್ಳುವುದು.
* ಇಲ್ಲ 2025ರ ಜನವರಿಯಲ್ಲಿದ್ದ ಮತದಾರರ ಪಟ್ಟಿಯನ್ನೇ ಆಧಾರವಾಗಿಟ್ಟುಕೊಂಡು ಯಾವುದೇ ಪರಿಷ್ಕರಣೆ ನಡೆಸದೇ ಚುನಾವಣೆಗೆ ಅವಕಾಶ ಮಾಡಿಕೊಡುವುದು.
