ದೇಶದಾದ್ಯಂತ ಬಹುತೇಕ ಭಾಗಗಳಲ್ಲಿ ದೀಪಾವಳಿ ಹಬ್ಬವನ್ನು ಒಂದೇ ದಿನ ಆಚರಿಸಲಾಗುತ್ತದೆ. ಆದರೆ ಹಿಮಾಚಲ ಪ್ರದೇಶದ ಬೆಟ್ಟ ಪ್ರದೇಶಗಳಲ್ಲಿ ಮಾತ್ರ ನಾವೆಲ್ಲ ಹಬ್ಬ ಆಚರಿಸಿದ ಒಂದು ತಿಂಗಳ ಬಳಿಕ ದೀಪಾವಳಿಯನ್ನು ಆಚರಣೆ ಮಾಡಲಾಗುತ್ತದೆ. ಅದರ ಹೆಸರು (Budhi Diwali) ಬುಧಿ ದಯಾವದಿ. ಹಿಮಾಚಲಿ ಭಾಷೆಯಲ್ಲಿ ಇದರ ಅರ್ಥ ಹಿರಿಯರು ಆಚರಿಸುತ್ತಿದ್ದ ಮೂಲ ದೀಪಾವಳಿ ಎಂದರ್ಥ.
ಬುಧಿ ದೀಪಾವಳಿ ಎಲ್ಲಿ ಆಚರಿಸುತ್ತಾರೆ?
ಹಿಮಾಚಲದ (Himachal Pradesh) ಸಿರ್ಮೌರ್ ಜಿಲ್ಲೆಯ ಶಿಲಾಯಿ, ರಾಜ್ಗಢ್, ಕುಲು-ಮನಾಲಿಯ ಹಳ್ಳಿಗಳು, ಮಂಡಿ ಜಿಲ್ಲೆಯ ಕೆಲವು ಕಣಿವೆಗಳಲ್ಲಿ ಹಾಗೂ ಉತ್ತರಾಖಂಡ್ನ ಕೆಲವು ಭಾಗಗಳಲ್ಲಿ ಬುಧಿ ದೀಪಾವಳಿ ಆಚರಣೆ ಮಾಡಲಾಗುತ್ತದೆ. ಈ ಹಳ್ಳಿಗಳಿಗೆ ಇಂದಿಗೂ ಸರಿಯಾದ ರಸ್ತೆ ಇಲ್ಲ. ಚಳಿಗಾಲದಲ್ಲಿ ಹಿಮದಿಂದ ಇಡೀ ಹಳ್ಳಿಗಳು ಕತ್ತಲಲ್ಲಿ ಮುಳುಗಿರುತ್ತವೆ. ಅಲ್ಲಿನ ಜನಕ್ಕೆ ದೀಪಾವಳಿ ಹೊಸ ವರ್ಷದ ಆಚರಣೆ ಸಹ ಆಗಿದೆ.
ಒಂದು ತಿಂಗಳು ತಡ ಯಾಕೆ?
ಈ ವಿಷಯದ ಬಗ್ಗೆ ಎರಡು ಜನಪದ ಕಥೆಗಳಿವೆ. ಮೊದಲನೆಯದು, ರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಮರಳಿದ ಸುದ್ದಿ ಬಯಲು ಪ್ರದೇಶಗಳಿಗೆ ಬೇಗ ತಲುಪಿತು. ಆದರೆ ಹಿಮಾಲಯದ ದುರ್ಗಮ ಕಣಿವೆಗಳಿಗೆ ಆ ಸುದ್ದಿ ತಲುಪಲು ಒಂದು ತಿಂಗಳು ಹಿಡಿಯಿತು. ತಡವಾಗಿ ಸುದ್ದಿ ತಲುಪಿದ ಆ ದಿನವನ್ನೇ ಅಲ್ಲಿನ ಜನ ದೀಪಾವಳಿಯಾಗಿ ಆಚರಿಸಲು ಶುರು ಮಾಡಿದರು. ಆ ಸಂಪ್ರದಾಯ ಇಂದಿಗೂ ಮುಂದುವರೆದಿದೆ.
ಎರಡನೆಯದು ದೈವಿಕ ನಂಬಿಕೆ, ದೀಪಾವಳಿ ಸಮಯದಲ್ಲಿ ಗ್ರಾಮದ ದೇವತೆಗಳು ಸ್ವರ್ಗಕ್ಕೆ ಹೋಗುತ್ತಾರೆ. ಅದಕ್ಕೆ ದೇವರಿಲ್ಲದೆ ಹಬ್ಬ ಆಚರಿಸೋದು ಹೇಗೆ ಎಂದು ದೇವರು ವಾಪಸ್ ಬಂದ ನಂತರ ಅಂದರೆ ಒಂದು ತಿಂಗಳ ನಂತರ ಹಬ್ಬ ಆಚರಿಸಲಾಗುತ್ತದೆ. ಇದಕ್ಕಾಗಿ ಅಲ್ಲಿನ ಜನ ಒಂದು ತಿಂಗಳು ಕಾಯುತ್ತಾರೆ.
ಪಟಾಕಿ ಇಲ್ಲ, ತುಪ್ಪದ ದೀಪದಲ್ಲಿ ಹಬ್ಬ
ಬುಧಿ ದೀಪಾವಳಿ ನಾವು ನೋಡುವ ದೀಪಾವಳಿಯಂತಲ್ಲ. ಇಲ್ಲಿ ವಿದುತ್ ಲೈಟ್ಸ್ ಇಲ್ಲ, ದುಬಾರಿ ಪಟಾಕಿ ಇಲ್ಲ. ಹಳ್ಳಿಯ ಮಧ್ಯದಲ್ಲಿ 100 ಕೆಜಿ ತುಪ್ಪದಿಂದ ಒಂದೇ ದೊಡ್ಡ ದೀಪವನ್ನು ಹಚ್ಚುತ್ತಾರೆ. ಆ ದೀಪ ಒಂದು ತಿಂಗಳು ಉರಿಯುತ್ತದೆ.
ಹಬ್ಬದ ದಿನ ಮನೆ ಬಾಗಿಲಿಗೆ ಕಾಡಿನ ಹುಲ್ಲು ಮತ್ತು ಬೆಳೆಗಳಲ್ಲಿ ಮಾಡಿದ ಹಾರ, ರಂಗೋಲಿ ಬದಲು ಮಣ್ಣಿನ, ಅಕ್ಕಿ ಹಿಟ್ಟಿನ ಚಿತ್ತಾರ ಬಿಡಿಸಲಾಗುತ್ತದೆ. ಇಡೀ ಹಳ್ಳಿ ಸೇರಿ ರಾತ್ರಿಯಿಡೀ ಬೂಡಾ ನೃತ್ಯ ಮಾಡುತ್ತಾರೆ. ಇದು ಯುದ್ಧ ಗೆದ್ದು ಬಂದ ರಾಮನನ್ನು ಸ್ವಾಗತಿಸುವ ನೃತ್ಯವೆಂಬ ನಂಬಿಕೆ ಇದೆ. ಹಬ್ಬದ ದಿನದಂದು ದನ, ಎತ್ತು, ಕುಡಗೋಲುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಹಬ್ಬದ ತಿಂಗಳು ಪೂರ್ತಿ ಮಾಂಸ, ಮದ್ಯಕ್ಕೆ ಈ ಭಾಗದಲ್ಲಿ ನಿಷೇಧ ವಿಧಿಸಲಾಗಿರುತ್ತದೆ.
