ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣಕ್ಕೆ (KPSC Scam Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಮುಖ ಆರೋಪಿ ಶಿವಶಂಕರಪ್ಪ ಸಾಹುಕಾರ್ (Shivashankarappa Sahukar) ಅವರ ಬೃಹತ್ ಅಕ್ರಮ ಹಣಕಾಸು ವ್ಯವಹಾರ ಬೆಳಕಿಗೆ ಬಂದಿದೆ. ಸಾಹುಕಾರ್ ಅವರು ಕೇವಲ ಒಂದು ವರ್ಷದಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿಗಳ ಅಕ್ರಮ ವ್ಯವಹಾರ ನಡೆಸಿರುವುದು ತಿಳಿದುಬಂದಿದೆ.
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಜೊತೆ ಕೈಜೋಡಿಸಿದ್ದ ಶಿವಶಂಕರಪ್ಪ ಸಾಹುಕಾರ್, 2025ರ ಆಗಸ್ಟ್ ಮತ್ತು ಡಿಸೆಂಬರ್ ಅವಧಿಯಲ್ಲಿ ಉದ್ಯಮಿಯಿಂದ ಬರೋಬ್ಬರಿ 4.99 ಕೋಟಿ ರೂಪಾಯಿ ಪಡೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ನಿಖರ ಮಾಹಿತಿಯ ಮೇರೆಗೆ ಇಡಿ ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿಯ ನಿವಾಸ ಮತ್ತು ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಬಂಧನ
ದಾಳಿಯ ವೇಳೆ ರಿಯಲ್ ಎಸ್ಟೇಟ್ ಉದ್ಯಮಿಯ ಕಾರಿನಲ್ಲಿ ಹಲವು ಪ್ರಮುಖ ದಾಖಲೆಗಳು ಹಾಗೂ ಕೈಬರಹದ ಪ್ರತಿಯೊಂದು ಡೈರಿ ಸಿಕ್ಕಿಬಿದ್ದಿದೆ. ಈ ಕೈಬರಹದ ದಾಖಲೆಗಳನ್ನು ಪರಿಶೀಲಿಸಿದಾಗ ಸಾಹುಕಾರ್ ಅವರ ಕೋಟ್ಯಂತರ ರೂಪಾಯಿಗಳ ಕಪ್ಪುಹಣದ ವಹಿವಾಟು ಹಾಗೂ ನೇಮಕಾತಿ ಹಗರಣದ ಕರಾಳ ಮುಖ ಸಂಪೂರ್ಣವಾಗಿ ಬಯಲಾಗಿದೆ. ಸದ್ಯ ಇ.ಡಿ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
