– ಒಬ್ಬ ರೈತನಿಗೆ 2-3 ಕಡೆ ಜಮೀನಿದ್ರೆ ಗರಿಷ್ಟ 2 ಹೆಕ್ಟೇರ್ಗೆ ಮಾತ್ರ ಪರಿಹಾರ
ಬೆಂಗಳೂರು: ರಾಜ್ಯದಲ್ಲಿ 226 ತಾಲ್ಲೂಕುಗಳಲ್ಲಿ ಬರ ಘೋಷಣೆಯಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ (Government of Karnataka) ಘೋಷಣೆ ಮಾಡಿದ್ದ ತಲಾ 2,500 ರೂ. ಪರಿಹಾರವನ್ನ ಒಂದೂವರೆ ತಿಂಗಳಲ್ಲೇ ವಿತರಣೆ ಮಾಡೋಕೆ ಮುಂದಾಗಿದೆ.
ಆದ್ರೆ ಪರಿಹಾರ ಪಡೆದುಕೊಳ್ಳಲು ಸರ್ಕಾರ ರೈತರಿಗೆ (Farmers) 17 ಷರತ್ತುಗಳನ್ನು ವಿಧಿಸಿದೆ. ತಾಲ್ಲೂಕುವಾರು ಬೆಳೆಹಾನಿಗೆ ನಮೂದಾಗಿರುವ ಜಮೀನುಗಳ ರೈತರಿಗೆ ಮಾತ್ರ ಪರಿಹಾರ ನೀಡಲಾಗುವುದು. ಕಡಿಮೆ ಜಮೀನುಳ್ಳ ರೈತರಿಂದ ಪರಿಹಾರ ವಿತರಣೆ ಆರಂಭಿಸಲಾಗುವುದು, ಮೊದಲು ಮಳೆಯಾಶ್ರಿತ, ನಂತರ ನೀರಾವರಿ ಬೆಳೆ, ತದ ನಂತರ ಬಹು ವಾರ್ಷಿಕ ಬೆಳೆ ಬೆಳೆದವರಿಗೆ ಪರಿಹಾರ. ಬೆಳೆ ಪರಿಹಾರ ಪಡೆಯುವ ರೈತನ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗಿರಬೇಕು, ವಿವಿಧ ನೀರಾವರಿ ಯೋಜನೆಗಳಲ್ಲಿ ಭೂಸ್ವಾಧೀನವಾದ ಜಮೀನುಗಳಿಗೆ ಪರಿಹಾರ ಇಲ್ಲ. ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡ ಜಮೀನಿನ ರೈತರಿಗೆ ಪರಿಹಾರ ಇಲ್ಲ. ಜಂಟಿ ಖಾತೆದಾರರಿದ್ರೆ ನೊಂದಾಯಿತ ವಿಸ್ತೀರ್ಣಕ್ಕೆ ಮಾತ್ರ ಪರಿಹಾರ ನೀಡಲಾಗುವುದು. ಜೊತೆಗೆ ಒಬ್ಬ ರೈತನಿಗೆ 2-3 ತಾಲ್ಲೂಕುಗಳಲ್ಲಿ ಜಮೀನಿದ್ರೆ ಗರಿಷ್ಟ 2 ಹೆಕ್ಟೇರ್ಗೆ ಮಾತ್ರ ಪರಿಹಾರ ಸೇರಿದಂತೆ 17 ಷರತ್ತುಗಳನ್ನ ವಿಧಿಸಲಾಗಿದೆ.
ಕಳೆದ ತಿಂಗಳು ನಡೆದ ವಿಶೇಷ ಅಧಿವೇಶನದಲ್ಲಿ 45 ರಿಂದ 50 ಲಕ್ಷ ರೈತರಿಗೆ ತಲಾ ಎರಡೂವರೆ ಸಾವಿರ ಪರಿಹಾರ ಕೊಡುವ ಘೋಷಣೆ ಮಾಡಲಾಗಿತ್ತು. ಇದರಿಂದ ಸರ್ಕಾರಕ್ಕೆ 1,250 ಕೋಟಿ ರೂ ವೆಚ್ಚ ಆಗಲಿದೆ. ಆದ್ರೆ ಪರಿಹಾರ ಕೊಡಲು ವಿಳಂಬ ಆರೋಪದ ಬೆನ್ನಲ್ಲೇ ಈಗ ಸರ್ಕಾರ 17 ಷರತ್ತುಗಳೊಂದಿಗೆ ಪರಿಹಾರ (Drought Relief) ಕೊಡಲು ಮುಂದಾಗಿದೆ. ಸರ್ಕಾರದ ಷರತ್ತುಗಳು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
17 ಷರತ್ತುಗಳೇನು..?
1. ಬೆಳೆಹಾನಿ ಪರಿಹಾರ (Input subsidy) ವನ್ನು ಭೂಮಿ ಸೆಲ್ ನಿರ್ವಹಿಸುತ್ತಿರುವ ಪರಿಹಾರ ತಂತ್ರಾಂಶದ ಮೂಲಕ ವಿತರಣೆ ಮಾಡಲಾಗುತ್ತಿದೆ. ಪ್ರಸ್ತುತ ವರ್ಷ ಬರ ಘೋಷಣೆಯಾಗಿರುವ ಹಿನ್ನೆಲೆ ಬಾಧಿತ ರೈತರಿಗೆ ತ್ವರಿತ ಮತ್ತು ಕ್ರಮಬದ್ಧವಾಗಿ ಬೆಳೆಹಾನಿ ಪರಿಹಾರ ವಿತರಿಸಲು ಇ-ಆಡಳಿತ ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ FRUITS ದತ್ತಾಂಶದ ಮತ್ತು 2026ನೇ ಸಾಲಿನ ಮುಂಗಾರು ಋತುವಿನ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯನ್ನ ಭೂಮಿ ಕೋಶ ರವರು ಇ-ಆಡಳಿತ ಇಲಾಖೆಯಿಂದ ಪಡೆಯುವುದು. ಬೆಳೆಹಾನಿ ಪರಿಹಾರದ ವಿತರಣೆಯಲ್ಲಿ ಪಾರದರ್ಶಕತೆ ತರಲು, ದತ್ತಾಂಶ ನಿರ್ವಹಣೆಯಲ್ಲಿ ಆಗುತ್ತಿದ್ದ ತಪ್ಪುಗಳು ಮತ್ತು ದೋಷಗಳನ್ನು ತಡೆಗಟ್ಟಲು ಅರ್ಹ ರೈತರುಗಳಿಂದ ಯಾವುದೇ ರೀತಿಯ ಅರ್ಜಿಗಳನ್ನು ಪಡೆಯದೆ ಸಕ್ಷಮ ದತ್ತಾಂಶಗಳ ಅನುಸಾರ ಅರ್ಹತೆಗೆ ಅನುಗುಣವಾಗಿ ಬೆಳೆಹಾನಿ ಪರಿಹಾರ FRUITS ತಂತ್ರಾಂಶದಲ್ಲಿ ನೋಂದಣಿಯಾಗಿ Farmer ID ಹೊಂದಿರುವ ಹಾಗೂ ಬರ ಘೋಷಣೆಯಾಗಿರುವ ತಾಲ್ಲೂಕುಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ಮೆಮೋರಾಂಡಮ್ನಲ್ಲಿ ನಮೂದಾಗಿರುವ ತಾಲ್ಲೂಕುವಾರು (ಮಳೆಯಾಶ್ರಿತ/ ನೀರಾವರಿ ಬೆಳೆ, ಬಹುವಾರ್ಷಿಕ) ವಿಸ್ತೀರ್ಣ, ತಾಲ್ಲೂಕುವಾರು ನಮೂದು ಆಗಿರುವ ಬೆಳೆ ಹಾನಿಗೆ ಒಳಪಟ್ಟಿರುವ ಬೆಳೆಗಳಿಗೆ ಸೀಮಿತಗೊಳಿಸಿ ಬೆಳೆ ಹಾನಿ ಪರಿಹಾರ ಪಾವತಿಸಲಾಗುವುದು.
2. 2026 ನೇ ಸಾಲಿನ ಮುಂಗಾರು ಋತುವಿಗೆ ಬರ ಪೀಡಿತವೆಂದು ಘೋಷಿಸಲಾದ 226 ತಾಲ್ಲೂಕು (ಅನುಬಂಧ-1) ಗಳಲ್ಲಿ ಜಿಲ್ಲಾಧಿಕಾರಿಗಳಿಂದ ಜಂಟಿ ಸಮೀಕ್ಷೆ ಆಧಾರದ ಮೇಲೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ಕೂಢೀಕೃತ ಮತ್ತು ದೃಢೀಕೃತ ಮಾಹಿತಿಯನ್ನು ಪಡೆದು ಅದರಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಮೆಮೊರಾಂಡಮ್ನಲ್ಲಿ ಬೆಳೆವಾರು, ತಾಲ್ಲೂಕುವಾರು ವಿಸ್ತೀರ್ಣ ಹಾಗೂ ಮಳೆಯಾಶ್ರಿತ/ ನೀರಾವರಿ/ ಬಹುವಾರ್ಷಿಕ ವಿವರಗಳನ್ನು (ಅನುಬಂಧ-2) ನಮೂದಿಸಲಾಗಿರುತ್ತದೆ. ಭೂಮಿ ಕೋಶರವರು ಈ ರೀತಿ ಬೆಳೆಹಾನಿ ಪರಿಹಾರಕ್ಕೆ, ಅರ್ಹ ರೈತರ ಪಟ್ಟಿಯನ್ನು ಮೇಲೆ ಓದಲಾದ (3) ರಲ್ಲಿ ಇರುವ ಮಾರ್ಗಸೂಚಿಗಳ ಪ್ರಕಾರ ತಯಾರಿಸುವಾಗ ಕೇಂದ್ರ ಸರ್ಕಾರಕ್ಕೆ NDRF ಅಡಿ ನೆರವು ಕೋರಿ ಸಲ್ಲಿಸಿರುವ ಮನವಿಗಳಲ್ಲಿ ವಿವರಿಸಿರುವಂತೆ ಜಿಲ್ಲಾಧಿಕಾರಿಗಳಿಂದ ವಿವರವಾದ ಬೆಳಹಾನಿ ವರದಿಯನ್ನು ಪಡೆದು ತಾಲೂಕುವಾರು ಗುರುತಿಸಲ್ಪಟ್ಟಿರುವ ಬೆಳೆಗಳಿಗೆ, ತಾಲ್ಲೂಕುವಾರು ಗುರುತಿಸಲ್ಪಟ್ಟಿರುವ ಬೆಳೆಹಾನಿಯುಂಟಾಗಿರುವ ಮಳೆಯಾಶ್ರಿತ ನೀರಾವರಿ ಮತ್ತು ಬಹುವಾರ್ಷಿಕ ವಿಸ್ತೀರ್ಣಕ್ಕೆ ಒಳಪಟ್ಟು SDRF ಮಾರ್ಗಸೂಚಿಯ ಅನ್ವಯ ಅರ್ಹ ರೈತರಿಗೆ ಒಟ್ಟು ಪರಿಹಾರ ಮೊತ್ತವನ್ನು ಲೆಕ್ಕಾಚಾರ ಮಾಡಿ ಅರ್ಹತೆಯ ಅನುಗುಣವಾಗಿ ರೂ.2500 ವರೆಗೆ ಬೆಳೆಹಾನಿ ಪರಿಹಾರದ ಮೊದಲನೇ ಕಂತಾಗಿ ಅಥವಾ ಪರಿಪೂರ್ಣ ಬೆಳೆಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ FRUITS ತಂತ್ರಾಂಶದಲ್ಲಿ ನೋಂದಣಿಯಾಗಿ Farmer ID ಹೊಂದಿರುವ ಆಧಾರ್ ಜೋಡಣೆಯಾಗಿರುವ ಅರ್ಹ ರೈತರಿಗೆ DBT ಮೂಲಕ ನಿಯಮಾನುಸಾರ ಪಾವತಿಸಲಾಗುವುದು. ಭೂಮಿ ಕೋಶರವರು payment logic ಪ್ರಕಾರ ತಾಲ್ಲೂಕಿನಲ್ಲಿ ಅತೀ ಕಡಿಮೆ ಭೂಮಿಯನ್ನು ಹೊಂದಿರುವ ಅರ್ಹ ರೈತನಿಂದ ಪ್ರಾರಂಭಿಸಿ ಅತೀ ಹೆಚ್ಚು ಭೂಮಿಯನ್ನು ಹೊಂದಿರುವ ಅರ್ಹ ರೈತನಿಗೆ ಆರೋಹಣ ಕ್ರಮದಲ್ಲಿ (ascending Order) ಪಾವತಿ ಮಾಡಲಾಗುವುದು. ಇದರಲ್ಲಿಯೂ ಸಹ ಮಳೆಯಾಶ್ರಿತ ಬೆಳೆ ನಂತರ ನೀರಾವರಿ ಬೆಳೆ, ತದನಂತರ ಬಹು ವಾರ್ಷಿಕ ಬೆಳೆಗೆ ಈ ಕ್ರಮದಲ್ಲಿ ಪರಿಹಾರ ಮೊತ್ತವನ್ನು ಪಾವತಿ ಮಾಡಲಾಗುವುದು.
3. ಫಲಾನುಭವಿಯು ಜಮೀನಿಗೆ ಸಂಬಂಧಿಸಿದಂತೆ ನಿಯಮಾನುಸಾರ ಅಗತ್ಯ ದಾಖಲೆಗಳನ್ನು (RTC ಇತ್ಯಾದಿ) ಹೊಂದಿರಬೇಕು.
4. ಬೆಳೆಹಾನಿ ಪರಿಹಾರ ಪಡೆಯುವ ಫಲಾನುಭವಿಯ ಆಧಾರ್ ಸಂಖ್ಯೆಯು ಬ್ಯಾಂಕ್ ಖಾತೆಗೆ ಜೋಡಣೆಯಾಗಿರಬೇಕು. ಅಂತಹ ಫಲಾನುಭವಿಗಳಿಗೆ ನಿಯಮಾನುಸಾರ ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ DBT ಮೂಲಕ ಬೆಳೆ ಹಾನಿ ಪರಿಹಾರ ಪಾವತಿ ಮಾಡಲಾಗುವುದು.
5. ಈ ಹಿಂದೆ ನೀರಾವರಿ ಯೋಜನೆಗಳಿಗೆ ರೈತರ ಕೃಷಿ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಂಡು ರೈತರಿಗೆ ಭೂ ಪರಿಹಾರ ನೀಡಲಾಗಿದೆ. ಆದರೆ, ಇನ್ನೂ ಕೆಲವು ಪಕರಣಗಳಲ್ಲಿ ಪಹಣಿಗಳಲ್ಲಿ ನೀರಾವರಿ ಇಲಾಖೆಯ ಹೆಸರು ಸೇರ್ಪಡೆ ಆಗಿರುವುದಿಲ್ಲ. ಆದ್ದರಿಂದ ಭೂಮಿ ಕೋಶರವರು ಭೂಸ್ವಾಧೀನವಾದ ವಿಸ್ತೀರ್ಣಕ್ಕೆ ಭೂಮಿ ದತ್ತಾಂಶದಲ್ಲಿ ಬೆಳೆ ಸಮೀಕ್ಷೆಯಲ್ಲಿ ಸೇರಿದ್ದರೂ ಬೆಳೆಹಾನಿ ಪರಿಹಾರಕ್ಕೆ ಪರಿಗಣಿಸತಕ್ಕದಲ್ಲ.
6. ಕೃಷಿಯೇತರ ಉದ್ದೇಶಕ್ಕಾಗಿ ಕೃಷಿ ಜಮೀನು ಭೂ-ಪರಿವರ್ತನೆಯಾಗಿ ಬೆಳೆ ಸಮೀಕ್ಷೆಯಲ್ಲಿ ಸೇರ್ಪಡೆಯಾದರೂ ಕೂಡ ಇಂತಹ ಪ್ರಕರಣಗಳನ್ನ ಭೂಮಿ ಸೆಲ್ ರವರು ಬೆಳೆಹಾನಿ ಪರಿಹಾರಕ್ಕೆ ಪರಿಗಣಿಸತಕ್ಕದಲ್ಲ.
7. ಸರ್ಕಾರಿ ಜಮೀನುಗಳನ್ನು ಭೂಮಿ ದತ್ತಾಂಶದಲ್ಲಿ ಗುರುತಿಸಿ ಬೆಳೆಹಾನಿ ಪರಿಹಾರ ನೀಡದಂತೆ ಭೂಮಿ ಕೋಶರವರು ನೋಡಿಕೊಳ್ಳತಕ್ಕದ್ದು.
8. RTC ಕಾಲಂನಲ್ಲಿ ಅಧಿಕೃತವಾಗಿ ಭೂ ಪರಿವರ್ತನೆ ಎಂದು ನಮೂದಾಗದೆ ಇದ್ದರೂ ಸಹ ವಾಸ್ತವಿಕವಾಗಿ ಇತ್ತೀಚಿನ ಬೆಳೆ ಸಮೀಕ್ಷೆಯ ದತ್ತಾಂಶದಲ್ಲಿ NA (ಭೂ ಪರಿವರ್ತನೆ) ಎಂದು ದಾಖಲಿಸಿರುವ ಕೃಷಿ ಜಮೀನುಗಳನ್ನು ಭೂಮಿ ಕೋಶರವರು ಬೆಳೆ ಹಾನಿ ಪರಿಹಾರಕ್ಕೆ ಪರಿಗಣಿಸತಕ್ಕದ್ದಲ್ಲ.
9. ಜಂಟಿ ಖಾತೆದಾರರಾಗಿದ್ದಲ್ಲಿ FRUITS ತಂತ್ರಾಶದಲ್ಲಿ ನೋಂದಾಯಿಸಿದ ವಿಸ್ತೀರ್ಣಕ್ಕೆ ಅನುಗುಣವಾಗಿ ಬೆಳೆಹಾನಿ ಪರಿಹಾರ ಪಾವತಿಸುವುದು.
10. ಒಂದೇ ಹಿಸ್ಸಾ ಜಮೀನುಗಳಲ್ಲಿ ಬಹು ಮಾಲೀಕರಿದ್ದಲ್ಲಿ ಒಂದೇ ವಿಸ್ತೀರ್ಣದ ಕ್ಷೇತ್ರಕ್ಕೆ ಎರಡು ಸಲ ಬೆಳೆ ಹಾನಿ ಪರಿಹಾರ ಪಾವತಿಯಾಗದ ಹಾಗೆ ಭೂಮಿ ಸೆಲ್ ರವರು ನೋಡಿಕೊಳ್ಳತಕ್ಕದ್ದು.
11. ಒಂದೇ ಹಿಸ್ಸಾ ಜಮೀನಿಗೆ ಒಂದೇ ವಿಸ್ತೀರ್ಣಕ್ಕೆ ಎರಡು ಸಲ (ಡಬಲ್ ಪೇಮೆಂಟ್) ಬೆಳೆ ಹಾನಿ ಪರಿಹಾರ ಪಾವತಿಯಾಗದ ಹಾಗೆ ಭೂಮಿ ಕೋಶರವರು ನೋಡಿಕೊಳ್ಳತಕ್ಕದ್ದು.
12. ಎರಡು ಅಥವಾ ಅದಕ್ಕಿಂತಾ ಹೆಚ್ಚಿನ ತಾಲ್ಲೂಕುಗಳಲ್ಲಿ ಕೃಷಿ ಜಮೀನುಗಳನ್ನ ಹೊಂದಿದ್ದಲ್ಲಿ ಅರ್ಹತೆಯಂತೆ ಬೆಳೆ ಪರಿಹಾರವನ್ನ ಒಬ್ಬ ರೈತನಿಗೆ ಗರಿಷ್ಠ ಕ್ಷೇತ್ರ 2 ಹೆಕ್ಟೇರ್ಗಿಂತಾ ಹೆಚ್ಚಿಗೆ ನೀಡದಂತೆ ಭೂಮಿ ಸೆಲ್ ರವರು ನೋಡಿಕೊಳ್ಳತಕ್ಕದ್ದು.
13. ಮನವಿಯಲ್ಲಿ ಸಲ್ಲಿಸಲಾದ ತಾಲ್ಲೂಕುವಾರು, ಬೆಳೆವಾರು ಬೆಳೆಹಾನಿ ವಿವರಗಳಲ್ಲಿ, ಒಂದೇ ಹಿಸ್ಸಾ ಕ್ಷೇತ್ರದಲ್ಲಿ ಒಂದಕ್ಕಿಂತಾ ಹೆಚ್ಚು ಬೆಳೆಗಳನ್ನು ಬೆಳೆದಿದ್ದಲ್ಲಿ ಯಾವ ಬೆಳೆಯು ಗರಿಷ್ಟ ಪ್ರಮಾಣದಲ್ಲಿ ಬೆಳೆಯಲಾಗಿದೆಯೋ, ಆ ಬೆಳೆಗೆ ಪರಿಹಾರ ಮೊತ್ತವನ್ನು ನೀಡಲು payment logic ನಲ್ಲಿ ಭೂಮಿ ಕೋಶರವರು ಪರಿಗಣಿಸತಕ್ಕದ್ದು.
14. RTCಯಲ್ಲಿರುವ ವಿಸ್ತೀರ್ಣ ಮತ್ತು ಬೆಳೆ ಸಮೀಕ್ಷೆಯಲ್ಲಿರುವ ವಿಸ್ತೀರ್ಣದಲ್ಲಿ ವ್ಯತ್ಯಾಸವಿರುವ ಪ್ರಕರಣಗಳನ್ನ Village Administrator Officer ರವರ ಲಾಗಿನ್ಗೆ ಭೂಮಿ ಸೆಲ್ ರವರು ಕಳುಹಿಸುವುದು. ಅಂತಹ ಪ್ರಕರಣಗಳನ್ನ ಸ್ಥಳೀಯವಾಗಿ ವಾಸ್ತವಾಂಶಗಳ ಪರಿಶೀಲನೆ ಮಾಡಿ ಮೂರು (3) ದಿನಗಳಲ್ಲಿ VAO ರವರು ನಿಯಮಗಳಂತೆ ಬಯೋಮೆಟ್ರಿಕ್ (Bio-Metric) ದೃಢೀಕರಣದ ಮೂಲಕ ಷರಾ ನಮೂದಿಸುವುದು.
15. ಆಧಾರ್ ಮತ್ತು RTCಗಳಲ್ಲಿನ ಹೆಸರುಗಳಲ್ಲಿ ಶೇ.70ರಷ್ಟು ಹೊಂದಾಣಿಕೆಯಾಗದ ಪ್ರಕರಣಗಳನ್ನ ಪರಿಶೀಲನೆಗಾಗಿ ತಹಶೀಲ್ದಾರರ ಲಾಗಿನ್ಗೆ ಭೂಮಿ ಸೆಲ್ ರವರು ಕಳುಹಿಸುವುದು. ಅಂತಹ ಪ್ರಕರಣಗಳನ್ನ ಸ್ಥಳೀಯವಾಗಿ ವಾಸ್ತವಾಂಶಗಳ ಪರಿಶೀಲನೆ ಮಾಡಿ 5 ದಿನಗಳಲ್ಲಿ ತಹಶೀಲ್ದಾರ್ರವರು bio-metric ದೃಢೀಕರಣದ ಮೂಲಕ ನಿಯಮಗಳಂತೆ ಷರಾ ನಮೂದಿಸುವುದು.
16. ಬೆಳೆಹಾನಿ ಪರಿಹಾರ ಪ್ರಾರಂಭ ಮಾಡುವುದಕ್ಕಿಂತ ಪೂರ್ವದಲ್ಲಿ ಮೇಲಿನ ಎಲ್ಲಾ ಷರತ್ತುಗಳನ್ನ ಗಮನದಲ್ಲಿಟ್ಟುಕೊಂಡು ಬೆಳೆಹಾನಿ ಪರಿಹಾರ ಪಾವತಿಸಲು ತಮ್ಮ ಜಿಲ್ಲೆಯಲ್ಲಿನ ಪರಿಹಾರ ದತ್ತಾಂಶಕ್ಕೆ digital signature ಮೂಲಕ ಜಿಲ್ಲಾಧಿಕಾರಿಗಳು ಅನುಮೋದನೆ ನೀಡತಕ್ಕದ್ದು.
17. ಜಿಲ್ಲಾವಾರು, ತಾಲ್ಲೂಕುವಾರು, ಗ್ರಾಮವಾರು, ಫಲಾನುಭವಿವಾರು ವಿತರಣೆಯಾಗಿರುವ ಬೆಳೆಹಾನಿ ಪರಿಹಾರದ ವಿವರಗಳನ್ನು ಭೂಮಿ ಸೆಲ್ ರವರು ಪರಿಹಾರ ತಂತ್ರಾಂಶದ ಅಧಿಕೃತಜಾಲ ತಾಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಹಾಗೂ
ಪಾರದರ್ಶಕತೆಗಾಗಿ ಅಳವಡಿಸತಕ್ಕದ್ದು.
