ತುಮಕೂರು: ಕೆಪಿಎಸ್ಸಿ ಹಗರಣದ (KPSC Scam) ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆಗೆ (Basavaraj Kannale) ಮತ್ತೊಂದು ಶಾಕ್ ಎದುರಾಗಿದೆ. ತುಮಕೂರು ವಿಶ್ವವಿದ್ಯಾಲಯದ (Tumakuru University) ಸಿಂಡಿಕೇಟ್ ಸದಸ್ಯ ಸ್ಥಾನದಿಂದ ಕನ್ನಾಳೆಯನ್ನು ವಜಾಗೊಳಿಸಲಾಗಿದೆ.
ರಾಜ್ಯಪಾಲರ ನಿರ್ದೇಶನದಂತೆ ಸಿಂಡಿಕೇಟ್ ಸದಸ್ಯತ್ವದಿಂದ ಕಿಕ್ ಔಟ್ ಮಾಡಲಾಗಿದೆ. ಈ ಸಂಬಂಧ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಯಿಂದ ತುಮಕೂರು ವಿ.ವಿ ಕುಲಪತಿಗೆ ಪತ್ರ ರವಾನಿಸಲಾಗಿದೆ. ಬಸವರಾಜ್ ಕನ್ನಾಳೆಯನ್ನ ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಸ್ಥಾನದಿಂದ ವಜಾ ಮಾಡಿದೆ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: KPSC Scam | 10 ತಿಂಗಳಲ್ಲಿ ಕೋಟಿ ಕೋಟಿ ಕಮಾಯ್ – 8 ಕೋಟಿ ಮೌಲ್ಯದ ಆಸ್ತಿ ಖರೀದಿಸಿದ್ದ ಕನ್ನಾಳೆ
ಬಸವರಾಜ್ ಕನ್ನಾಳೆ ಜಾಗಕ್ಕೆ ಬೆಂಗಳೂರು ಮೂಲದ ಕೆ.ಬಿ.ಸಂದೀಪ್ ಎಂಬವರಿಗೆ ಸಿಂಡಿಕೇಟ್ ಸದಸ್ಯ ಸ್ಥಾನ ಕೊಡಲಾಗಿದೆ. ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಹೊಸ ಸಿಂಡಿಕೇಟ್ ಸದಸ್ಯ ಕೆ.ಬಿ.ಸಂದೀಪ್ ಅವರನ್ನು ತುಮಕೂರು ವಿವಿ ನೇಮಕ ಮಾಡಿಕೊಳ್ಳಲಿದೆ.
ಆರೋಪಿ ಕನ್ನಾಳೆ ತುಮಕೂರು ವಿವಿಯಲ್ಲಿ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯನಾಗಿದ್ದ. ಕೆಪಿಎಸ್ಸಿ ಹಗರಣದಲ್ಲಿ ಆತನ ಹೆಸರು ಕೇಳಿ ಬಂದ ಬಳಿಕ, ವಜಾಗೊಳಿಸುವಂತೆ ಎಬಿವಿಪಿಯಿಂದ ಪ್ರತಿಭಟನೆ ನಡೆದಿತ್ತು. ಈ ಸಂಬಂಧ ಕನ್ನಾಳೆಗೆ ನೋಟಿಸ್ ಕೊಡುವಂತೆ ತುಮಕೂರು ವಿವಿಗೆ ರಾಜ್ಯಪಾಲರು ಪತ್ರ ಬರೆದಿದ್ದರು. ಇದನ್ನೂ ಓದಿ: ಕೆಪಿಎಸ್ಸಿ ಅಕ್ರಮದ ಕಿಂಗ್ಪಿನ್ ಬಸವರಾಜ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು
ರಾಜ್ಯಪಾಲರ ಸೂಚನೆ ಮೇರೆಗೆ ಬಸವರಾಜ್ ಕನ್ನಾಳೆಗೆ ತುಮಕೂರು ವಿವಿ ಎರಡು ಬಾರಿ ನೋಟಿಸ್ ನೀಡಿತ್ತು. ಎರಡು ನೋಟಿಸ್ಗೂ ಕನ್ನಾಳೆ ಉತ್ತರ ನೀಡಿರಲಿಲ್ಲ. ಇದೀಗ ಸಿಂಡಿಕೇಟ್ ಸದಸ್ಯ ಸ್ಥಾನದಿಂದ ವಜಾಗೊಳಿಸಲಾಗಿದೆ.
