– ಶೀಘ್ರದಲ್ಲೇ ಆಡಿಯೋ ರಿಲೀಸ್ ಮಾಡ್ತೀನಿ ಅಂತಾ ಬಾಂಬ್
ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಪ್ರತಿಕ್ರಿಯಿಸಿರುವ ಧನ್ವೀರ್, ತಮ್ಮ ಬಳಿ ಕೂಡ ಆಡಿಯೋ ದಾಖಲೆಗಳಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿರುವ ಅವರು, ನನ್ನ ಬಳಿಯೂ ಆಡಿಯೋ ದಾಖಲೆಗಳಿವೆ. ಎಲ್ಲೋ ಕುಳಿತು ವೈರಲ್ ಮಾಡುವುದರಿಂದ ಯಾವುದೇ ಅರ್ಥವಿಲ್ಲ. ಆ ಆಡಿಯೋದಲ್ಲಿ ಎಲ್ಲವೂ ನಾನು ಮಾತನಾಡಿಲ್ಲ. ಕೆಲ ವಿಷಯಗಳನ್ನ ತುಂಬಾ ಚೆನ್ನಾಗಿ ಸೇರಿಸಿದ್ದಾರೆ, ನನ್ನ ಬಳಿ ಅವ್ರೇ ಮಾತನಾಡಿರುವ ಅಡಿಯೋಗಳಿವೆ ಶೀಘ್ರದಲ್ಲೇ ಬಿಡುಗಡೆ ಮಾಡ್ತೀನಿ. ವಿಜಯಲಕ್ಷ್ಮಿ ಮಾತ್ರವಲ್ಲದೆ, ಅವರ ಹಿಂದೆ ಯಾರಿದ್ದಾರೆ ಎಂಬುದೂ ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ ಎಂದು ಧನ್ವೀರ್ ಹೇಳಿದ್ದಾರೆ.
ನಾನು ದರ್ಶನ್ ಅಣ್ಣನ ಬಳಿ ಹೋಗಿ ಮಾತನಾಡ್ತೀನಿ, ಎಲ್ಲಾ ವಿಚಾರ ಹೇಳ್ತೀನಿ ಎಂಬ ಕಾರಣಕ್ಕೆ ಹಲವು ಪ್ರಯತ್ನಗಳನ್ನ ಮಾಡಲಾಗಿದೆ. ಧನ್ವೀರ್ ಬಂದರೆ ಬಿಡಬಾರದು ಎಂಬ ರೀತಿಯಲ್ಲಿ ಸೆಟ್ಟಿಂಗ್ಸ್ ಮಾಡಿದ್ದಾರೆ. ಇದೆಲ್ಲ ಗಲಾಟೆಗಳೆಲ್ಲ ಮುಗಿದ ಬಳಿಕ ದರ್ಶನ್ ಅಣ್ಣನನ್ನ ಭೇಟಿಯಾಗುತ್ತೇನೆ ಎಂದಿದ್ದಾರೆ.
ಮನೆಗೆ ಬಂದವರ ವಿರುದ್ಧ ಆಕ್ರೋಶ
10 ಕೋಟಿ ಹಣದ ವಿಚಾರ ಅಂತಾ ನನ್ನ ಮೇಲೆ ಆರೋಪ ಮಾಡ್ತಿದ್ದಾರೆ. ನಾನು ಇದ್ದಾಗಲೇ ಮನೆಗೆ ಬರಲಿ, ತಮ್ಮ ಮನೆಯಲ್ಲಿ ತಾಯಿ, ತಂಗಿ, ಅಜ್ಜಿ ಸೇರಿದಂತೆ ಮಹಿಳೆಯರಿದ್ದು, ನಾನು ಇಲ್ಲದ ಸಮಯದಲ್ಲಿ ಬಂದು ಮಾತನಾಡಿರುವುದು ಸರಿಯಲ್ಲ. ಏನಾದರೂ ಮಾತನಾಡಬೇಕಿದ್ದರೆ ನನಗೆ ಫೋನ್ ಮಾಡಬಹುದಿತ್ತು. ನಾನು ಬರುತ್ತಿದ್ದೆ. ನಾನು ಮನೆಯಲ್ಲಿದ್ದಾಗ ಬಂದಿದ್ದರೆ ಒಳ್ಳೆಯದಿತ್ತು. ನಾನು ಇಲ್ಲದ ಸಂದರ್ಭದಲ್ಲಿ ಮನೆಗೆ ಬಂದು ಮಾತನಾಡುವುದನ್ನ ಯಾರು ಸಹಿಸಿಕೊಳ್ಳುತ್ತಾರೆ? ರಸ್ತೆ ಮೇಲೆ ಹೋಗುವವರು ಮನೆಗೆ ಬಂದು ಮಾತನಾಡಿದರೆ ನೀವೂ ಸಹಿಸುವುದಿಲ್ಲ ಎಂದು ಧನ್ವೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ನನ್ನ ಮನೆಗೆ ಬಂದಿದ್ದವರಿಗೆ 20 ಬಾರಿ ಕಾಲ್ ಮಾಡಿದೆ. ಬನ್ನಿ ಮಾತನಾಡೋಣ ಅಂತಾ ಕರೆದೆ. ಯಾರೂ ಬಂದಿಲ್ಲ, ಅದಾದ್ಮೇಲೆ ವಾಟ್ಸಪ್ನಲ್ಲಿ ಸಂದೇಶ ಹಾಕಿದ್ದಾಗಿ ಅವರು ಹೇಳಿದ್ದಾರೆ.
ಹಣಕಾಸಿನ ವ್ಯವಹಾರದ ಆರೋಪಕ್ಕೂ ಸವಾಲು
ಈ ವಿವಾದಕ್ಕೆ ಹಣಕಾಸಿನ ವ್ಯವಹಾರವೇ ಕಾರಣ ಎಂಬ ಮಾತುಗಳ ಬಗ್ಗೆಯೂ ಧನ್ವೀರ್ ಪ್ರತಿಕ್ರಿಯಿಸಿದ್ದಾರೆ. ಆರೋಪ ಮಾಡುವವರು ಬಹಿರಂಗವಾಗಿ ಬಂದು ಮಾತನಾಡಲಿ. ತಾವು ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧರಿದ್ದು, ಆರೋಪಗಳನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ. ವೇದಿಕೆಗೆ ಸಮಯ ನಿಗದಿಪಡಿಸಲಿ. ನಾನು ಬರುತ್ತೇನೆ, ಕುಳಿತು ಮಾತನಾಡುತ್ತೇನೆ. ಆರೋಪಗಳನ್ನು ಸಾಬೀತುಪಡಿಸಲಿ. ನಾನು ಎಲ್ಲವನ್ನೂ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ದರ್ಶನ್ ಅಣ್ಣನಿಗಾಗಿ ಇಷ್ಟು ದಿನ ಸುಮ್ಮನಿದ್ದೆ
ದರ್ಶನ್ ಅವರಿಗೆ ಮತ್ತಷ್ಟು ತೊಂದರೆಯಾಗಬಾರದು ಎಂಬ ಕಾರಣಕ್ಕೆ ಇಷ್ಟು ತಿಂಗಳು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೆ. ಆದರೆ ನಮ್ಮ ಮನೆಯ ಮಹಿಳೆಯರ ವಿಚಾರ ಬಂದಾಗ ಸುಮ್ಮನಿರಲು ಸಾಧ್ಯವಿಲ್ಲ. ಈ ಬೆಳವಣಿಗೆಗಳಿಂದ ದರ್ಶನ್ ಅವರಿಗೂ ತೊಂದರೆಯಾಗುತ್ತಿದೆ. ಪ್ರಕರಣಗಳಿಗೆ ಸಂಬಂಧಿಸಿದ ಎಫ್ಎಸ್ಎಲ್ ವರದಿಗಳನ್ನು ಪರಿಶೀಲಿಸಬೇಕು. ಆಗ ಎಲ್ಲಾ ಸತ್ಯಾಸತ್ಯತೆಗಳು ಹೊರಬರುತ್ತೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
ಇನ್ನೂ ನಾನು ದರ್ಶನ್ ಅವರನ್ನ ಭೇಟಿಯಾಗ್ತೀನಿ, ಎಲ್ಲಾ ವಿಚಾರ ಹೇಳ್ತೀನಿ ಅಂತಾ ದರ್ಶನ್ ಅವರನ್ನು ಭೇಟಿಯಾಗದಂತೆ ತಡೆಯಲು ನನ್ನ ವಿರುದ್ಧ ಕಟ್ಟುಕಥೆಗಳನ್ನು ಸೃಷ್ಟಿಸಲಾಗಿದೆ. ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸುತ್ತೇನೆ. ಈ ಎಲ್ಲಾ ಗಲಾಟೆಗಳು ಮುಗಿದ ಬಳಿಕ ದರ್ಶನ್ ಅವರನ್ನ ಮೀಟ್ ಮಾಡ್ತೀನಿ ಅಂದಿದ್ದಾರೆ.
