ಕ್ರೈಸ್ಟ್ಚರ್ಚ್: ತಿಲಕ್ ವರ್ಮಾ, ನಮನ್ ಧೀರ್, ನಿತೀಶ್ ಕುಮಾರ್ ರೆಡ್ಡಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕಿವೀಸ್ ವಿರುದ್ಧ ಟೀಂ ಇಂಡಿಯಾ 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಕಾಯ್ದುಕೊಂಡಿದೆ.
ಕೊನೇ 10 ಓವರ್ಗಳಲ್ಲಿ 115 ರನ್ ಚೇಸ್
ಸ್ಪರ್ಧಾತ್ಮಕ ರನ್ ಗುರಿ ಬೆನ್ನಟ್ಟಿದ ಭಾರತ ಅಗ್ರ ಕ್ರಮಾಂಕದ ಬ್ಯಾಟರ್ಗಳ ಕಳಪೆ ಪ್ರದರ್ಶನದಿಂದ ಮೊದಲ 10 ಓವರ್ಗಳಲ್ಲೇ 66 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. 11ನೇ ಓವರ್ ಮುಗಿಯುವ ವೇಳೆಗೆ 5 ವಿಕೆಟ್ ಕಳೆದುಕೊಂಡು 75 ರನ್ಗಳನ್ನಷ್ಟೇ ಗಳಿಸಿತ್ತು. ಆದ್ರೆ ಕೊನೆಯ 10 ಓವರ್ಗಳಲ್ಲಿ ತಿಲಕ್, ನಮನ್, ನಿತೀಶ್ ಸ್ಫೋಟಕ ಪ್ರದರ್ಶನದಿಂದ 115 ರನ್ ಚೇಸ್ ಮಾಡಿ ಗುರಿ ತಲುಪಿತು.
ಕೊನೇ ಓವರ್ ಥ್ರಿಲ್ಲರ್ ಹೇಗಿತ್ತು?
ಕೊನೇ ಓವರ್ನಲ್ಲಿ ಕಿವೀಸ್ ಗೆಲುವಿಗೆ 11 ರನ್ಗಳ ಅಗತ್ಯವಿತ್ತು. ಆರ್ಸಿಬಿ ತಂಡದಿಂದಲೂ ಖ್ಯಾತಿ ಪಡೆದಿದ್ದ ಜಾಕೊಬ್ ಡಫಿ ಬೌಲಿಂಗ್ನಲ್ಲಿದ್ದರು. ಕ್ರೀಸ್ನಲ್ಲಿದ್ದ ನಿತೀಶ್ ಮೊದಲ ಎಸೆತದಲ್ಲಿ 1 ರನ್ ಕದ್ದು ತಿಲಕ್ಗೆ ಕ್ರೀಸ್ ಬಿಟ್ಟುಕೊಟ್ಟರು. 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ತಿಲಕ್, 3ನೇ ಎಸೆತದಲ್ಲಿ 2 ರನ್, 4ನೇ ಎಸೆತದಲ್ಲಿ 1 ರನ್ ಕದ್ದರು. ಇನ್ನೂ ಢಫಿ ಎಸೆದ 5ನೇ ಎಸೆತ ಓವರ್ ಬೌನ್ಸರ್ ಆಗಿ ಲೆಗ್ ಅಂಪೈರ್ ವೈಡ್ ಕೊಟ್ಟರು. ಇದರಿಂದ ಟೀಂ ಇಂಡಿಯಾ ಗೆಲುವಿಗೆ ಇನ್ನಷ್ಟು ಹತ್ತಿರವಾಯಿತು. ಬಳಿಕ ಓವರ್ನ 5ನೇ ಎಸೆತದಲ್ಲಿ ನಿತೀಶ್ 2 ರನ್ ಕದಿಯುವ ಮೂಲಕ ಗೆಲುವು ತರುವಲ್ಲಿ ಯಶಸ್ವಿಯಾದರು.
ಕ್ರೈಸ್ಟ್ ಚರ್ಚ್ನ ಹ್ಯಾಗ್ಲಿ ಓವಲ್ ಮೈದಾನದಲ್ಲಿಂದು ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಗ್ಲೆನ್ ಫಿಲಿಪ್ಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 180 ರನ್ ಬಾರಿಸಿತು. ಈ ಗುರಿ ಬೆನ್ನಟ್ಟಿದ ಭಾರತ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ 6 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಗೆದ್ದು ಬೀಗಿತು.
ಭಾರತದ ಪರ ತಿಲಕ್ ವರ್ಮಾ 26 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ನೆರವಿನಿಂದ 51 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು. ತಂಡಕ್ಕೆ ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 27, ನಿತೀಶ್ ಕುಮಾರ್ ರೆಡ್ಡಿ 13 ಎಸೆತಗಳಲ್ಲಿ 26 ರನ್ಗಳ ಕೊಡುಗೆ ನೀಡಿದರು. ನಮನ್ ಧೀರ್ 17 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ಸಿಡಿಸಿ 31 ರನ್ ಕಲೆ ಹಾಕಿದರು.
ನ್ಯೂಜಿಲೆಂಡ್ ಮೊದಲ 5.2 ಓವರ್ಗಳಲ್ಲಿ 41 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಗ್ಲೆನ್ ಫಿಲಿಪ್ಸ್ (70) ಮತ್ತು ಬೆವೋನ್ ಜೇಕಬ್ (58) 116 ರನ್ಗಳ ಜೊತೆಯಾಟ ಆಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಭಾರತದ ಪರ ಅರ್ಷ್ದೀಪ್ ಸಿಂಗ್ 2 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಪ್ರಿನ್ಸ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
