– ಆರಂಭದಲ್ಲೇ ಸೀಟು ಹಂಚಿಕೆ ಪೈಪೋಟಿ ತೀವ್ರ
ಲಕ್ನೋ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ (UP Assembly Elections) ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ (Samajwadi Party) ನಡುವೆ ಸೀಟು ಹಂಚಿಕೆ ಮಾತುಕತೆ ಶುರುವಾಗಿದೆ.
ಮೈತ್ರಿಕೂಟವಾಗಿ ನಾವು ಪ್ರಭಾವ ಬೀರಬಲ್ಲೆವು ಎಂದು ನಂಬಿರುವ ಕಾಂಗ್ರೆಸ್ (Congress) 175 ರಿಂದ 200 ಸ್ಥಾನಗಳಿಗೆ ಬೇಡಿಕೆಯಿಟ್ಟು ಕ್ಷೇತ್ರಗಳ ಪಟ್ಟಿಯನ್ನ ಸಲ್ಲಿಸಿದೆ. ಇದು ರಾಜ್ಯದ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಮುನ್ನ, ಮಾತುಕತೆ ನಡೆಸಲು ಕಾಂಗ್ರೆಸ್ ಸಿದ್ಧವಾಗಿದೆ ಎಂಬುದನ್ನು ಸೂಚಿಸಿದೆ.
ಕ್ಷೇತ್ರಗಳ ಪಟ್ಟಿಯನ್ನು ಕೆಲ ದಿನಗಳ ಹಿಂದೆಯೇ ಸಮಾಜವಾದಿ ಪಕ್ಷದ ನಾಯಕರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಅವರು ತಿಳಿಸಿದ್ದಾರೆ. ಈ ಕುರಿತು ಉಭಯ ಪಕ್ಷಗಳ ನಡುವೆ ಪೈಪೋಟಿ ತೀವ್ರಗೊಂಡಿದೆ.
ನಾನು ನಿಖರವಾದ ಸಂಖ್ಯೆಯನ್ನು ಹೇಳಲಾರೆ, ಆದರೆ ನಾವು 175 ರಿಂದ 200 ಸ್ಥಾನಗಳ ಪಟ್ಟಿ ಸಲ್ಲಿಸಿದ್ದೇವೆ. ಸೀಟು ಹಂಚಿಕೆ ವ್ಯವಸ್ಥೆಯ ಸೂಕ್ಷ್ಮ ವಿವರಗಳನ್ನ ಅಂತಿಮಗೊಳಿಸಲು ಎರಡೂ ಪಕ್ಷಗಳ ನಾಯಕರು ಒಟ್ಟಾಗಿ ಕುಳಿತು ಚರ್ಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಆದಾಗ್ಯೂ, ಕಾಂಗ್ರೆಸ್ ಪಕ್ಷವು ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನ ಕೇಳಿರುವುದು ಸಮಾಜವಾದಿ ಪಕ್ಷದ ವಲಯದಲ್ಲೂ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. 175 ರಿಂದ 200 ಕ್ಷೇತ್ರಗಳಲ್ಲಿ ಸ್ಪರ್ಧಿಸುವಷ್ಟು ರಾಜಕೀಯ ಶಕ್ತಿ ಕಾಂಗ್ರೆಸ್ಗೆ ಇದೆಯೇ ಎಂದು ಎಸ್ಪಿ ನಾಯಕರು ಪ್ರಶ್ನಿಸಿದ್ದು, 60 ರಿಂದ 70 ಸ್ಥಾನಗಳನ್ನ ನೀಡಲು ಚಿಂತನೆ ನಡೆಸಿದೆ.
ಈ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಾತನಾಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಗೆಲ್ಲುವ ಸಾಮರ್ಥ್ಯ’ (winnability) ಒಂದೇ ಮಾನದಂಡ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ನಮ್ಮೆಲ್ಲರ ಸಾಮೂಹಿಕ ಗುರಿ. ಈ ಮೈತ್ರಿಕೂಟವು ಪರಿಣಾಮಕಾರಿಯಾಗಿ ಮುನ್ನಡೆಯಲಿದೆ ಎಂದು ಪ್ರತಿಪಾದಿಸಿದರು.
ಮುಂದುವರಿದು… ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ‘ಇಂಡಿಯಾ’ (INDIA) ಮೈತ್ರಿಕೂಟವನ್ನು ಬಲಪಡಿಸಬೇಕಿದೆ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದು ನಮ್ಮ ಸಾಮೂಹಿಕ ಗುರಿ. ಬಿಜೆಪಿಯನ್ನು ಸೋಲಿಸಲು ನಾವು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಉತ್ತರ ಪ್ರದೇಶದಲ್ಲಿ 1989 ರಿಂದಲೂ ಕಾಂಗ್ರೆಸ್ನ ಚುನಾವಣಾ ಪ್ರದರ್ಶನ ಕುಸಿಯುತ್ತಲೇ ಬಂದಿದೆ. ಆ ವರ್ಷವೇ ಪಕ್ಷವು ಕೊನೆಯ ಬಾರಿಗೆ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. 2022ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಿತ್ತು, ಆದರೆ ಕೇವಲ 2 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. 2017ರಲ್ಲಿ ಪಕ್ಷವು 7 ಸ್ಥಾನಗಳನ್ನು ಗೆದ್ದಿತ್ತು. ಆದರೆ, 2024ರ ಲೋಕಸಭಾ ಚುನಾವಣೆಯು ಸಮಾಜವಾದಿ ಪಕ್ಷದ (SP) ಜೊತೆಗಿನ ಮೈತ್ರಿಯ ಬಗ್ಗೆ ಕಾಂಗ್ರೆಸ್ನ ವಿಶ್ವಾಸ ಹೆಚ್ಚಿಸಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದರೆ, ಸಮಾಜವಾದಿ ಪಕ್ಷವು 37 ಸ್ಥಾನಗಳನ್ನ ಪಡೆದುಕೊಂಡಿತು. ಇದರ ಪರಿಣಾಮವಾಗಿ ಬಿಜೆಪಿ 33 ಸ್ಥಾನಗಳಿಗೆ ಸೀಮಿತಗೊಂಡಿತು.

