ಬೆಂಗಳೂರು: ಕೆಪಿಎಸ್ಸಿ (KPSC) ನೇಮಕಾತಿ ಹಗರಣದ ತನಿಖೆ ಚುರುಕುಗೊಂಡಿದೆ. ಇದೀಗ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ (Gyanendra Kumar) ವಿರುದ್ದ ಪ್ರಾಸಿಕ್ಯೂಷನ್ಗೆ ಸರ್ಕಾರ ಅನುಮತಿ ನೀಡಿದೆ.
ಈ ಕುರಿತು ಸಿಎಂ ಕಚೇರಿಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಕೆಪಿಎಸ್ಸಿಯಲ್ಲಿ ನಡೆದಿದ್ದ ಪಶುವೈದ್ಯಾಧಿಕಾರಿ ಅಕ್ರಮದ ತನಿಖೆ ನಡೆಸಲು ಅನುಮತಿ ಕೇಳಲಾಗಿತ್ತು. ಇದೀಗ ಸಿಎಂ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಗ್ಯಾನೇಂದ್ರ ಕುಮಾರ್ ವಿರುದ್ದ ಪ್ರಾಸಿಕ್ಯೂಷನ್ಗೆ ಅನುಮತಿ ಸಿಕ್ಕಿದೆ. ಇದನ್ನೂ ಓದಿ: ಇದು ನನ್ನ ಮೇಲೆ ಅನುಮಾನ ಬರುವಂತೆ ನಡೆಯುತ್ತಿರುವ ತನಿಖೆ – ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್ಡಿಕೆ ವಾಗ್ದಾಳಿ
ಈ ಸಂಬಂಧ ಸಿಎಂ ಡಿಕೆ ಶಿವಕುಮಾರ್ (DK Shivakumar) ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ತಪ್ಪಿತಸ್ಥರಿಗೆ ರಕ್ಷಣೆ ಇಲ್ಲ. ಯುವಜನತೆಯ ಭವಿಷ್ಯದ ಜೊತೆ ಆಟವಾಡುವ ಯಾವುದೇ ಕೃತ್ಯಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಸಾರ್ವಜನಿಕ ನೇಮಕಾತಿ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಭ್ರಷ್ಟಾಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಆದ್ಯತೆ ನೀಡುವುದು ನಮ್ಮ ಬದ್ಧತೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಆಡಳಿತಕ್ಕೆ ಕಪ್ಪುಚುಕ್ಕೆ ತರುವ ಕೃತ್ಯಗಳಿಗೆ ಮನ್ನಣೆಯಿಲ್ಲ ಎಂದು ಬರೆದುಕೊಂಡಿದ್ದಾರೆ.
