ಬಾಗಲಕೋಟೆ: ಕೆಲ ದಿನಗಳಿಂದ ನಾಪತ್ತೆಯಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ದೈಹಿಕ ಪ್ರಮುಖ್ ಒಬ್ಬರು ಮುಧೋಳ ನಗರದ ಕೆರೆಯಲ್ಲಿ(Mudhol Lake) ಶವವಾಗಿ ಪತ್ತೆಯಾಗಿದ್ದಾರೆ.
ಮೃತರನ್ನು ಪ್ರಮೋದ್ ಮಮದಾಪುರ (44) ಎಂದು ಗುರುತಿಸಲಾಗಿದೆ. ಇವರು ಜಮಖಂಡಿ ಭಾಗದ ಆರ್ಎಸ್ಎಸ್ ದೈಹಿಕ ಶಿಕ್ಷಕರಾಗಿ (ಶಾರೀರಿಕ್ ಪ್ರಮುಖ್) ಸಕ್ರಿಯರಾಗಿದ್ದು, ಸಂಘದ ಕಾರ್ಯಕರ್ತರಿಗೆ ದಂಡ ಪ್ರಹಾರ, ಕರಾಟೆ ಸೇರಿದಂತೆ ವಿವಿಧ ಶಾರೀರಿಕ ತರಬೇತಿಗಳನ್ನು ನೀಡುತ್ತಿದ್ದರು.
ನವರಾತ್ರಿ ಹಬ್ಬದ ಆರಂಭದ ಸಂದರ್ಭದಲ್ಲಿ “ನಾನು ಧಾರ್ಮಿಕ ಅನುಷ್ಠಾನಕ್ಕೆ ಕುಳಿತುಕೊಳ್ಳುತ್ತಿದ್ದೇನೆ, ಯಾರೂ ನನಗೆ ಕರೆ ಮಾಡಬೇಡಿ” ಎಂದು ಹೇಳಿ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರು. ಆ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಶುಕ್ರವಾರ ಮುಧೋಳ ನಗರದ ಹೊರವಲಯದ ದತ್ತ ಕೆರೆಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ತೇಲುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಮುಧೋಳ ಠಾಣಾ ಪೊಲೀಸರು ಪರಿಶೀಲನೆ ನಡೆಸಿದಾಗ, ಮೃತದೇಹ ಪ್ರಮೋದ್ ಮಮದಾಪುರ ಅವರದ್ದೇ ಎಂಬುದು ದೃಢಪಟ್ಟಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಮುಧೋಳ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
