ತುಮಕೂರು: ಹಾಲು ಒಕ್ಕೂಟದ (TUMUL) ನೇಮಕಾತಿ ಅಕ್ರಮದ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. 2016-17ನೇ ಸಾಲಿನಲ್ಲಿ ನಡೆದ 97 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ನೌಕರಿಯಿಂದ ವಂಚಿತ ಅಭ್ಯರ್ಥಿಗಳು, ಈಗ ಮತ್ತೆ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದಾರೆ.
ಈಗಾಗಲೇ ಕಾನೂನು ಹೋರಾಟದಲ್ಲಿ ಜಯ ಸಾಧಿಸಿರುವ ವೇಣುಗೋಪಾಲ್ ಅವರ ಬೆನ್ನಲ್ಲೇ, ಇನ್ನುಳಿದ 37 ಅಭ್ಯರ್ಥಿಗಳೂ ಹೋರಾಟಕ್ಕೆ ಸಜ್ಜಾಗಿದ್ದಾರೆ.
97 ಹುದ್ದೆಗಳ ನೇಮಕಾತಿ ಬಗ್ಗೆ ಆರೋಪ
ತುಮುಲ್ನಲ್ಲಿ 2016-17ನೇ ಸಾಲಿನಲ್ಲಿ ಎಫ್ಡಿಎ, ಸಿಸ್ಟಮ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆದಿತ್ತು. ಒಟ್ಟು 97 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಕೆಲವು ಹುದ್ದೆಗಳಿಗೆ 25ರಿಂದ 50 ಲಕ್ಷ ರೂಪಾಯಿವರೆಗೆ ಹಣ ಪಡೆದು ನೇಮಕ ಮಾಡಲಾಗಿದೆ ಎಂದು ವಂಚಿತ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಅರ್ಹತೆ ಇದ್ದರೂ ತಮಗೆ ಉದ್ಯೋಗ ಸಿಗಲಿಲ್ಲ ಎಂಬುದು ಅವರ ಅಳಲು.
9 ವರ್ಷಗಳ ಹೋರಾಟಕ್ಕೆ ವೇಣುಗೋಪಾಲ್ಗೆ ಜಯ
ಅಸಿಸ್ಟೆಂಟ್ ಸಿಸ್ಟಮ್ ಮ್ಯಾನೇಜರ್ ಹುದ್ದೆಯಿಂದ ವಂಚಿತರಾಗಿದ್ದ ವೇಣುಗೋಪಾಲ್ ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಲಿಖಿತ ಪರೀಕ್ಷೆಯಲ್ಲಿ ವೇಣುಗೋಪಾಲ್ಗೆ 102 ಅಂಕ ಬಂದಿದ್ದರೆ, 77 ಅಂಕ ಪಡೆದಿದ್ದ ಮಧುಸೂದನ್ಗೆ ಹುದ್ದೆ ನೀಡಲಾಗಿತ್ತು ಎಂಬುದು ಅವರ ವಾದವಾಗಿತ್ತು.
ಈ ನೇಮಕಾತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ವೇಣುಗೋಪಾಲ್ಗೆ ಹೈಕೋರ್ಟ್ನಲ್ಲಿ ಜಯ ಸಿಕ್ಕಿತ್ತು. ಬಳಿಕ ಸುಪ್ರೀಂ ಕೋರ್ಟ್ನಲ್ಲೂ ಅವರ ಪರವಾಗಿ ತೀರ್ಪು ಬಂದ ಹಿನ್ನೆಲೆಯಲ್ಲಿ, ಮಧುಸೂದನ್ ಹುದ್ದೆ ಕಳೆದುಕೊಂಡಿದ್ದು, ವೇಣುಗೋಪಾಲ್ಗೆ ಆ ಹುದ್ದೆ ದೊರೆತಿದೆ ಎಂದು ವರದಿಯಾಗಿದೆ.
ಉಳಿದ 37 ಅಭ್ಯರ್ಥಿಗಳಿಂದಲೂ ಹೋರಾಟ
ವೇಣುಗೋಪಾಲ್ ಅವರ ಕಾನೂನು ಹೋರಾಟಕ್ಕೆ ಜಯ ಸಿಕ್ಕ ಬೆನ್ನಲ್ಲೇ, ಉಳಿದ 37 ಅಭ್ಯರ್ಥಿಗಳೂ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ. 2016-17ನೇ ಸಾಲಿನ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ರಚಿತಾ ರಾಮ್ ಹೆಗಲ ಮೇಲೆ ಕೈ ಹಾಕಿ ಸೆಲ್ಫಿಗೆ ಯತ್ನ – ಅಭಿಮಾನಿ ಹುಚ್ಚಾಟ
ನೇಮಕಾತಿ ವೇಳೆ ಒಎಂಆರ್ ಶೀಟ್ಗಳನ್ನು ತಿದ್ದಲಾಗಿದೆ, ಪರೀಕ್ಷೆಯಲ್ಲಿ ಉತ್ತರಗಳನ್ನು ಹೇಳಿಕೊಡಲಾಗಿದೆ ಹಾಗೂ ಹಣ ಪಡೆದು ಹುದ್ದೆಗಳನ್ನು ನೀಡಲಾಗಿದೆ ಎಂಬ ಆರೋಪಗಳನ್ನು ಅಭ್ಯರ್ಥಿಗಳು ಮಾಡಿದ್ದಾರೆ. ಈ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ ಎಂಬುದು ಅವರ ಒತ್ತಾಯವಾಗಿದೆ.
ಇದೀಗ 38 ಅಭ್ಯರ್ಥಿಗಳು ನ್ಯಾಯಕ್ಕಾಗಿ ಮತ್ತೆ ಹೈಕೋರ್ಟ್ ಮೊರೆ ಹೋಗಲು ಮುಂದಾಗಿರುವುದರಿಂದ ತುಮುಲ್ ನೇಮಕಾತಿ ಪ್ರಕರಣ ಮತ್ತೊಮ್ಮೆ ಚರ್ಚೆಗೆ ಬಂದಿದೆ.ಇದನ್ನೂ ಓದಿ: Asian Para Games: ಆರ್ಚರಿಯಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ
