ಹುಬ್ಬಳ್ಳಿ: ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ಮಾಂಜಾ ದಾರಕ್ಕೆ (Manja String) ಸಿಲುಕಿ ಹುಬ್ಬಳ್ಳಿಯಲ್ಲಿ (Hubballi) ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ, ತೀವ್ರ ರಕ್ತಸ್ರಾವದಿಂದ ಮಹಿಳೆ ಮೃತಪಟ್ಟಿರುವ ಘಟನೆ ನಗರದ ಶಿವಶಂಕರ ಕಾಲೋನಿ ಬಳಿ ಇಂದು ಮಧ್ಯಾಹ್ನ ನಡೆದಿದೆ.
ಮೃತರನ್ನು ಹುಬ್ಬಳ್ಳಿಯ ಭರತ್ ನಗರದ ನಿವಾಸಿ, 38 ವರ್ಷದ ವಿದ್ಯಾ ಮಂಜುನಾಥ ಗೌಡ ಎಂದು ಗುರುತಿಸಲಾಗಿದೆ. ವಿದ್ಯಾ ಲ್ಯಾಬ್ ಟೆಕ್ನಿಷಿಯನ್ (Lab Technician) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಮನೆಯಿಂದ ಲ್ಯಾಬ್ಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಾಂಜಾ ದಾರ ಕುತ್ತಿಗೆಗೆ ಸಿಲುಕಿದ ಪರಿಣಾಮ ವಿದ್ಯಾ ಸ್ಕೂಟಿಯಿಂದ ಕೆಳಗೆ ಬಿದ್ದಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಬೆಳಗಾವಿ ಹುಡುಗನಿಗೆ ಕಂಚಿನ ಪದಕ: ಈಜು ಸ್ಪರ್ಧೆಯಲ್ಲಿ ಸ್ವಾತಿಕ್ ಪಾಟೀಲ್ಗೆ ಕಂಚು
ಈ ಸಂಬಂಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿ ಮೃತ ಮಹಿಳೆಯ ದೇಹವನ್ನು ಪರಿಶೀಲಿಸಿದರು. ಕುಟುಂಬಸ್ಥರಿಂದ ಘಟನೆಯ ಕುರಿತು ಮಾಹಿತಿ ಪಡೆದರು. ಬಳಿಕ ಎಚ್ಚರಿಕೆ ನೀಡಿದ ಪೊಲೀಸ್ ಆಯುಕ್ತರು, ಗಾಳಿಪಟ ಹಾರಿಸಲು ಮಾಂಜಾ ದಾರ ಬಳಸುವವರನ್ನು ಪತ್ತೆಹಚ್ಚಲಾಗುವುದು. ಮಾಂಜಾ ದಾರ ಬಳಸುವವರ ವಿರುದ್ಧ ಮಾತ್ರವಲ್ಲದೆ, ಅದನ್ನು ಮಾರಾಟ ಮಾಡುವವರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಮಾಂಜಾ ದಾರ ಬಳಸಬಾರದು ಎಂದು ಅವರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕಾಶಿ- ತಮಿಳು ಸಂಗಮ 5.0 ನೋಂದಣಿ ಪೋರ್ಟಲ್ ಲೋಕಾರ್ಪಣೆ; ಜೋಶಿ ಉದ್ಘಾಟನೆ
ಮೃತ ವಿದ್ಯಾ ಅವರ ಅಂತಿಮ ದರ್ಶನ ಪಡೆದ ಶಾಸಕ ಮಹೇಶ್ ಟೆಂಗಿನಕಾಯಿ, ಮಾಂಜಾ ದಾರದಿಂದ ಹಲವಾರು ಜೀವಹಾನಿಗಳು ಸಂಭವಿಸಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು. ಒಂದು ಮಾಂಜಾ ದಾರ ಸಾವಿಗೆ ಕಾರಣವಾಗುತ್ತದೆ ಎಂದರೆ ಇದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ಪೊಲೀಸರು ಮತ್ತು ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಮಾಂಜಾ ದಾರ ಮಾರಾಟ ಮಾಡುವವರ ಮೇಲೆ ದಾಳಿ ನಡೆಸಿ ಬಂಧಿಸಬೇಕು. ನಿಷೇಧವಿದ್ದರೂ ಈ ದಾರ ಜನರ ಕೈಗೆ ಹೇಗೆ ಸಿಗುತ್ತಿದೆ? ಎಂದು ಪ್ರಶ್ನಿಸಿದರು. ಕೇವಲ ಒಂದೆರಡು ಕಡೆ ಪರಿಶೀಲನೆ ನಡೆಸಿದರೆ ಸಾಲದು, ಮಾಂಜಾ ದಾರದ ಬಳಕೆಯನ್ನೇ ಸಂಪೂರ್ಣವಾಗಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಅ.31ಕ್ಕೆ ಮಂಡ್ಯಕ್ಕೆ ಸಿಎಂ ಡಿಕೆಶಿ ಭೇಟಿ – ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆಗೆ ಭರ್ಜರಿ ಸಿದ್ಧತೆ
