ಲಕ್ನೋ: ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬನ ಕೈಗಳನ್ನು ಕಾರಿನ ಕಿಟಕಿಗೆ ಕಟ್ಟಿ ಸುಮಾರು ಒಂದೂವರೆ ಕಿಮೀ ಎಳೆದೊಯ್ದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ನಡೆದಿದೆ.
ಈ ಭೀಕರ ಘಟನೆಯು ಅಕ್ಟೋಬರ್ 20ರ ದಸರಾ ಹಬ್ಬದ ರಾತ್ರಿ 10:30ರ ಸುಮಾರಿಗೆ ನಡೆದಿದೆ. ಕಾನ್ಪುರದ ಅರ್ರಾ ನಿವಾಸಿ ಬಿರು ಸಿಂಗ್ (37) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಮೂರು ಮಕ್ಕಳ ತಂದೆಯಾಗಿದ್ದು, ಇಬ್ಬರು ಹೆಣ್ಣುಮಕ್ಕಳು (ಸೆವಿ ಮತ್ತು ಇಶಾನಿ) ಹಾಗೂ ಒಬ್ಬ ಮಗ (ವಿರಾಜ್) ಇದ್ದಾರೆ. ಸಿಂಗ್ ಆಹಾರ ಉತ್ಪನ್ನಗಳ ಕಂಪನಿಯೊಂದರಲ್ಲಿ ಸೇಲ್ಸ್ಮ್ಯಾನ್ ಕೆಲಸ ಮಾಡುತ್ತಿದ್ದರು.
ರಾಜ್ವೀರ್ ಮತ್ತು ಮೇವಾಲಾಲ್ ಎಂಬವರ ಜೊತೆ ಸಿಂಗ್ ಜಗಳ ಮಾಡಿಕೊಂಡಿದ್ದರು. ಘಟನೆ ನಡೆದ ರಾತ್ರಿ, ದಸರಾ ಜಾತ್ರೆಯಿಂದ ಮನೆಗೆ ಮರಳುತ್ತಿದ್ದ ಸಿಂಗ್ ಮೇಲೆ ಹಲ್ಲೆ ನಡೆಸಲಾಗಿತ್ತು. ಸಿಂಗ್ ಸ್ಥಳದಿಂದ ತೆರಳಲು ಯತ್ನಿಸಿದಾಗ, ಆರೋಪಿಗಳು ಆತನಿಗೆ ಕಾರಿನಿಂದ ಡಿಕ್ಕಿ ಹೊಡೆದರು. ನಂತರ ಕೈಗಳನ್ನು ಕಾರಿನ ಕಿಟಕಿಗಳಿಗೆ ಕಟ್ಟಿ, ಸುಮಾರು ಒಂದೂವರೆ ಕಿಲೋಮೀಟರ್ಗಳಷ್ಟು ದೂರದವರೆಗೆ ಎಳೆದೊಯ್ದಿದ್ದಾರೆ. ನಂತರ ಸಿಂಗ್ ಮೇಲೆ ಕಾರನ್ನು ಹತ್ತಿಸಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳದ ಬಳಿ ಹಾದುಹೋಗುತ್ತಿದ್ದ ಸ್ಥಳೀಯ ನಿವಾಸಿ ದೇವೇಂದ್ರ ಸಿಂಗ್ ಚೌಹಾಣ್, ಗಂಭೀರ ಗಾಯಗೊಂಡು ಬಿದ್ದಿದ್ದ ಸಿಂಗ್ನನ್ನು ಗುರುತಿಸಿ, ಅವರ ಕುಟುಂಬಕ್ಕೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
