ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ವಿದ್ಯುತ್ ಅವಘಡಕ್ಕೆ ತಾಯಿ, ಮಗ ಬಲಿಯಾಗಿರುವ ಘಟನೆ ಮೂಡುಬಿದಿರೆ (Moodbidri) ಪಾಲಡ್ಕ ಗ್ರಾಮ ಪಂಚಾಯಿತಿಯ ವರ್ಣಬೆಟ್ಟುವಿನಲ್ಲಿ ನಡೆದಿದೆ.
ತಾಯಿ ಮರ್ಸಿ ಮಸ್ಕರೇನಸ್ (45), ಪುತ್ರ ಶೋನ್ ಮಸ್ಕರೇನಸ್ (18) ಮೃತ ದುರ್ದೈವಿಗಳು. ಮುಂಜಾನೆ 7 ರಿಂದ 8 ಗಂಟೆ ನಡುವೆ ಬಟ್ಟೆ ಒಣಗಿಸುವಾಗ ದುರಂತ ಸಂಭವಿಸಿದೆ. ಬಟ್ಟೆ ಒಣಗಲು ಹಾಕುವಾಗ ಬಟ್ಟೆ ತಂತಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಾಕಿದ್ದು, ತಾಯಿ ಮಗ ಸಾವನ್ನಪ್ಪಿದ್ದಾರೆ.
ಮೂಡುಬಿದಿರೆ ಹೋಲಿ ರೋಸರಿ ವಿದ್ಯಾರ್ಥಿಯಾಗಿದ್ದ ಶೋನ್ ಮಸ್ಕರೇನಸ್ ಬಟ್ಟೆ ಒಣಗಿಸುವಾಗ ವಿದ್ಯುತ್ ಅವಘಡ ಸಂಭವಿಸಿದೆ. ಈ ವೇಳೆ ಮಗನನ್ನ ರಕ್ಷಿಸಲು ಹೋದ ತಾಯಿಗೂ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.
ತೋಟದ ಕೆಲಸಕ್ಕೆ ಬಂದಿದ್ದ ಕಾರ್ಮಿಕನಿಂದ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮೂಡುಬಿದ್ರೆ ಪೊಲೀಸರು ಘಟನಾ ಸ್ಥಳ ಪರಿಶೀಲಿಸಿದ್ದು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.
