– ಎಸ್ಪಿ ರಿಷ್ಯಂತ್ ಜೊತೆ ವಾಗ್ವಾದಕ್ಕಿಳಿದ ಸಚಿವರು
ಮೈಸೂರು: ನಂದಿಧ್ವಜ ಪೂಜೆ ವೇಳೆ ಎಸ್ಪಿ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಆರೋಪ ಕೇಳಿಬಂದಿದೆ. ಸಿಎಂ ಡಿ.ಕೆ.ಶಿವಕುಮಾರ್ ಅವರ ಜೊತೆ ಪೂಜೆಗೆ ಬಂದ ಸಚಿವರನ್ನೇ ಎಸ್ಪಿ ರಿಷ್ಯಂತ್ ತಡೆದ ಪ್ರಸಂಗ ನಡೆದಿದೆ.
ಮೈಸೂರಿನ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಮುಂದೆ ಬುಧವಾರ ಈ ಘಟನೆ ನಡೆದಿದೆ. ಸಿಎಂ ಜೊತೆ ಬರುವ ಎಲ್ಲಾ ಸಚಿವರು, ಶಾಸಕರು ನಂದಿ ಕಂಬಕ್ಕೆ ಪೂಜೆ ಸಲ್ಲಿಸುವುದು ವಾಡಿಕೆ. ನಿನ್ನೆ ಸಿಎಂ ಜೊತೆ ಬಂದಿದ್ದ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೊರತುಪಡಿಸಿ ಯಾರನ್ನು ಸಹ ಎಸ್ಪಿ ರಿಷ್ಯಂತ್ ಪೂಜೆಗೆ ಬಿಟ್ಟಿಲ್ಲ. ಸಿಎಂ ಜೊತೆಗೆ ಬಂದ ಸಚಿವರನ್ನು ತಡೆದು ನಿಲ್ಲಿಸಿದರು. ಈ ವೇಳೆ ಸಚಿವರು ಎಸ್ಪಿ ಜೊತೆ ವಾಗ್ವಾದಕ್ಕಿಳಿದರು.
ಸಚಿವರಾದ ಶಿವರಾಜ್ ತಗಂಡಗಿ, ಬಸಂತಪ್ಪ, ನರೇಂದ್ರಸ್ವಾಮಿ ಅವರನ್ನು ಎಸ್ಪಿ ತಡೆದರು. ಮೊದಲಿಗೆ ತನ್ವೀರ್ ಸೇಠ್ ಒಳಗಡೆ ಬಿಡದ ಕಾರಣ ಹೊರಗೆ ನಿಂತಿದ್ರು. ಬಳಿಕ ಯತೀಂದ್ರ ಸಿದ್ದರಾಮಯ್ಯ ತನ್ವೀರ್ ಸೇಠ್ ಅವರನ್ನು ಪೂಜೆಗೆ ಕರೆದುಕೊಂಡು ಹೋದರು.
ಹೊರಗಡೆಯಿಂದಲೇ ಮೈಸೂರಿನ ಶಾಸಕರಾದ ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ್, ಪರಿಷತ್ ಸದ್ಯಸರಾದ ಕೆ.ಶಿವಕುಮಾರ್, ತಿಮ್ಮಯ್ಯ ಪೂಜೆ ಸಲ್ಲಿಸಿದರು. ಕ್ಷೇತ್ರದ ಶಾಸಕ ಶ್ರೀ ವತ್ಸರನ್ನು ಸಹ ಪೊಲೀಸರು ಪೂಜೆ ಬಿಟ್ಟಿಲ್ಲ.
ಸಿಎಂ ಕಚೇರಿಯಿಂದ ಇಂತಿಷ್ಟು ಜನರನ್ನ ಮಾತ್ರ ಬಿಡಬೇಕೆಂದು ಸೂಚನೆ ಇತ್ತ? ಅಥವಾ ಮೇಲಾಧಿಕಾರಿಗಳು ಇಂತವರಿಗೆ ಮಾತ್ರ ಬಿಡಬೇಕೆಂದು ಸೂಚನೆ ಕೊಟ್ಟಿದ್ರಾ? ರಿಷ್ಯಂತ್ ಹಿರಿಯ ಹಾಗೂ ಖಡಕ್ ಪೊಲೀಸ್ ಅಧಿಕಾರಿ. ಈ ಹಿಂದೆ ಮೈಸೂರು ಎಸ್ಪಿಯಾಗಿ ಕೆಲಸ ಮಾಡಿದ್ದವರು. ರಿಷ್ಯಂತ್ಗೆ ದಸರಾ ಆಚರಣೆಗಳು ಹೊಸದಲ್ಲ. ಎಸ್ಪಿ ರಿಷ್ಯಂತ್ಗೆ ಸಿಎಂ, ಡಿಸಿಎಂ, ಉಸ್ತುವಾರಿ ಸಚಿವರನ್ನ ಬಿಟ್ಟು ಯಾರನ್ನ ಬಿಡಬಾರದೆಂದು ಸೂಚನೆ ಕೊಟ್ಟಿದ್ದು ಯಾರು ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
